ಅಡುಗೆ ಮನೆಯಲ್ಲಿ ಇರುವಂತಹ ಸಾಂಬಾರ ಪದಾರ್ಥಗಳಲ್ಲೇ ನಮ್ಮ ಆರೋಗ್ಯ ರಕ್ಷಿಸುವ ಗುಣಗಳು ಇವೆ. ಇದನ್ನು ಸರಿಯಾಗಿ ಬಳಕೆ ಮಾಡಿದರೆ, ಯಾವುದೇ ರೀತಿಯ ಅನಾರೋಗ್ಯವೂ ದೇಹವನ್ನು ಕಾಡದಂತೆ ನೋಡಿಕೊಳ್ಳಬಹುದು. ಕೆಲವೊಂದು ಸಾಂಬಾರಗಳಲ್ಲಿ ಅದ್ಭುತವಾದ ಗುಣ ಹೊಂದಿದ್ದು, ರೋಗಗಳು ಬರದಂತೆ ತಡೆಯುವಂತಹ ಶಕ್ತಿಯು ಇದರಲ್ಲಿದೆ.
ತುಂಬಾ ಕಹಿಯಾಗಿ ಇರುವ ಮೆಂತ್ಯೆ ಕಾಳನ್ನು ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ಅದು ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೆಂತ್ಯೆ ಕಾಳು ಗುಣಪಡಿಸುವ ಕೆಲವೊಂದು ಕಾಯಿಲೆಗಳ ಬಗ್ಗೆ ಕೇಳಿದರೆ ಆಗ ನೀವು ಇದನ್ನು ಖಂಡಿತವಾಗಿಯೂ ತಪ್ಪದೆ ಬಳಕೆ ಮಾಡುವಿರಿ.
ಇದರಲ್ಲಿ ಕರಗುವಂತಹ ನಾರಿನಾಂಶವಿದ್ದು, ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಕಾರಿ. ಅದೇ ರೀತಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಹಸಿವು ಕಡಿಮೆ ಮಾಡು ತೂಕ ಇಳಿಸಲು ಸಹಕಾರಿ. ರಾತ್ರಿ ನೆನೆಸಲು ಹಾಕಿದ ಮೆಂತ್ಯೆ ಕಾಳನ್ನು ಬೆಳಗ್ಗೆ ಸೇವನೆ ಮಾಡಿದರೆ ಅದು ಕರುಳಿನ ಕ್ಯಾನ್ಸರ್ ನ್ನು ತಡೆಯುವುದು ಮತ್ತು ಆಮ್ಲೀಯ ಹಿಮ್ಮುಖ ಹರಿವು ಮತ್ತು ಎದೆಯುರಿ ಕಡಿಮೆ ಮಾಡಲು ನೆರವಾಗುವುದು.
ತೂಕ ಇಳಿಸಲು—ಮೆಂತ್ಯೆಕಾಳಿನಲ್ಲಿ ನೈಸರ್ಗಿಕವಾದ ನಾರಿನಾಂಶವಿದ್ದು, ಇದು ಹೊಟ್ಟೆಯಲ್ಲಿ ಉಬ್ಬಿಕೊಂಡು ಹೊಟ್ಟೆ ತುಂಬುವಂತೆ ಮಾಡುವುದು. ಹೀಗಾಗಿ ನಿಮ್ಮ ತಿನ್ನುವ ಬಯಕೆ ಕಡಿಮೆ ಆಗುವುದರೊಂದಿಗೆ ತೂಕ ಇಳಿಕೆಗೆ ಸಹಕಾರಿ.
ದಿನದಲ್ಲಿ ಎರಡು ಅಥವಾ ಮೂರು ಸಲ ನೀವು ಮೆಂತ್ಯೆ ಕಾಳುಗಳನ್ನು ಜಗಿಯಿರಿ. ಇದರಿಂದ ನಿಮಗೆ ಹೆಚ್ಚು ತೃಪ್ತಿ ಸಿಗುವುದು. ಬೆಳಗ್ಗೆ ಎರಡು ಲೋಟ ಮೆಂತ್ಯೆ ನೀರನ್ನು ಕುಡಿದರೆ ಅದು ಕೂಡ ತೂಕ ಇಳಿಸಲು ನೆರವಾಗಲಿದೆ.ಒಂದು ಚಮಚ ಮೆಂತ್ಯೆಕಾಳಿಗೆ ಎರಡು ಲೋಟ ನೀರು ಹಾಕಿ ರಾತ್ರಿ ನೆನೆಯಲು ಹಾಕಿ. ಬೆಳಗ್ಗೆ ಈ ನೀರನ್ನು ಕುಡಿಯಿರಿ. ದೇಹದಲ್ಲಿ ನೀರು ನಿಲ್ಲುವುದು ಮತ್ತು ಹೊಟ್ಟೆ ಉಬ್ಬರನವನ್ನು ತಡೆಯುವುದು.
ಜ್ವರ ಮತ್ತು ಗಂಟಲಿನ ಊತಕ್ಕೆ ಪರಿಹಾರ–ಒಂದು ಚಮಚ ಲಿಂಬೆ ರಸ ಹಾಗೂ ಜೇನುತುಪ್ಪದ ಜತೆಗೆ ಮೆಂತ್ಯೆಕಾಳನ್ನು ಸೇವನೆ ಮಾಡಿದರೆ, ಅದು ಜ್ವರದಿಂದ ಮುಕ್ತಿ ನೀಡುವುದು. ಮೆಂತ್ಯೆ ಕಾಳಿನಲ್ಲಿ ಇರುವಂತಹ ಗೋಂದಿನಂತಹ ಅಂಶವು ಗಂಟಲಿಗೆ ಶಮನ ನೀಡುವುದು.
ಮಹಿಳೆಯರಲ್ಲಿನ ಹಲವಾರು ಸಮಸ್ಯೆಗೆ ಇದು ಪರಿಣಾಮಕಾರಿ ಆಗಿದೆ. ಸ್ತನಗಳ ಗಾತ್ರ ಹಿಗ್ಗಿಸಲು ಮೆಂತ್ಯೆ ಕಾಳನ್ನು ಬಳಸಬಹುದು. ಇದನ್ನು ಬಳಕೆ ಮಾಡಿದವರಿಗೆ ಅದರ ಬಗ್ಗೆ ಖಂಡಿತವಾಗಿಯೂ ತಿಳಿದಿರುವುದು.ಮೆಂತ್ಯೆಯು ಸ್ತನಗಳ ಅಂಗಾಂಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಸ್ತನಗಳ ಗ್ರಂಥಿಗಳಿಗೆ ಶಕ್ತಿ ನೀಡುವುದು. ಇದರಲ್ಲಿ ಇರುವಂತಹ ಪೈಥೋಈಸ್ಟ್ರೋಜನ್ ಅಂಶವು ದೇಹದಲ್ಲಿ ಪ್ರೋಲ್ಯಾಕ್ಟಿನ್ ಮಟ್ಟವನ್ನು ಹೆಚ್ಚಿಸುವುದು ಮತ್ತು ಇದರಿಂದಾಗಿ ಸ್ತನಗಳ ಗಾತ್ರವು ಹಿಗ್ಗುವುದು. ಋತುಚಕ್ರದ ಸಂದರ್ಭದಲ್ಲಿ ಕಂಡುಬರುವಂತಹ ಸೆಳೆತ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ನಿವಾರಿಸುವುದು.
ಕೂದಲು ಉದುರುವಿಕೆ ತಡೆಯುವುದು—ಕೂದಲಿನ ಆರೋಗ್ಯ ಕಾಪಾಡುವಂತಹ ಪೋಷಕಾಂಶಗಳು ಮೆಂತ್ಯೆ ಕಾಳಿನಲ್ಲಿದೆ. ಹೀಗಾಗಿ ಇದನ್ನು ನೀವು ಆಹಾರ ಕ್ರಮದಲ್ಲಿ ಸೇರಿಸಿಕೊಂಡಿ, ಕೂದಲಿಗೆ ಹಚ್ಚಿಕೊಂಡರೆ ಆಗ ಬಹು ಉಪಯುಕ್ತ.ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳನ್ನು ಬೇಯಿಸಿಕೊಂಡು ಅದನ್ನು ತೆಂಗಿನ ಎಣ್ಣೆ ಜತೆಗೆ ಸೇರಿಸಿ ತಲೆಗೆ ಸರಿಯಾಗಿ ಮಸಾಜ್ ಮಾಡಿಕೊಂಡರೆ ಆಗ ಕೂದಲು ಉದುರುವುದನ್ನು ತಪ್ಪಿಸಬಹುದು. ತಲೆಹೊಟ್ಟು ನಿವಾರಣೆಗೂ ಇದು ತುಂಬಾ ಸಹಕಾರಿ.
ಜೀರ್ಣಕ್ರಿಯೆಗೆ ಸಹಕಾರಿ—ಕರುಳಿನ ಕ್ರಿಯೆಯು ಸರಿಯಾಗಿದ್ದರೆ ಆಗ ಆರೋಗ್ಯವು ಉತ್ತಮವಾಗಿರುವುದು. ಹೀಗಾಗಿ ಮೆಂತ್ಯೆ ಕಾಳನ್ನು ಸೇವನೆ ಮಾಡಿದರೆ, ಅದು ಕರುಳಿನ ಕ್ರಿಯೆ ಉತ್ತಮಪಡಿಸುವುದು ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಣೆ ಮಾಡುವುದು.ಇದೇ ವೇಳೆ ಅಜೀರ್ಣದಿಂದ ಕಂಡುಬರುವಂತಹ ಎದೆಯುರಿ ಸಮಸ್ಯೆ ನಿವಾರಿಸುವುದು. ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್ ಅಧಿಕವಾಗಿ ಇರುವ ಇದು ದೇಹದಲ್ಲಿ ಇರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು ಹಾಗೂ ಜೀರ್ಣಕ್ರಿಯೆಗೆ ಸಹಕರಿಸುವುದು. ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಆಗ ಮೆಂತ್ಯೆ ನೆನೆಸಿಟ್ಟು ಅದರ ನೀರನ್ನು ಕುಡಿದರೆ ಒಳ್ಳೆಯದು.
ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು—ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಮೆಂತ್ಯೆ ಕಾಳು ತುಂಬಾ ಲಾಭಕಾರಿ. ಇದರಲ್ಲಿ ಇರುವ ಅಮಿನೋ ಆಮ್ಲವು ಮೇದೋಗ್ರಂಥಿಗಳು ಇನ್ಸುಲಿನ್ ನ್ನು ಬಿಡುಗಡೆ ಮಾಡುವಂತೆ ನೋಡಿಕೊಳ್ಳುವುದು ಮತ್ತು ಇದರಿಂದ ದೇಹದಲ್ಲಿ ಗ್ಲುಕೋಸ್ ಮಟ್ಟವು ಕಡಿಮೆ ಆಗುವುದು.
ಕಾಂತಿಯುತ ತ್ವಚೆಗೆ–ತ್ವಚೆಯ ಸೌಂದರ್ಯವನ್ನು ಕಾಪಾಡುವುದು ದೊಡ್ಡ ಸವಾಲಿನ ಕೆಲಸ. ಕಲುಷಿತ ವಾತಾವರಣ, ಧೂಳು ಇತ್ಯಾದಿಗಳಿಂದ ತ್ವಚೆಯನ್ನು ರಕ್ಷಿಸಬೇಕು. ಇದಕ್ಕಾಗಿ ತ್ವಚೆಯನ್ನು ಆಂತರಿಕವಾಗಿ ಬಲಪಡಿಸಬೇಕು.ಮುಖ್ಯವಾಗಿ ನೆರಿಗೆ ಹಾಗೂ ಕಪ್ಪು ಕಲೆ ಉಂಟು ಮಾಡುವ ಫ್ರೀ ರ್ಯಾಡಿಕಲ್ ನ್ನು ಮೆಂತ್ಯೆಕಾಳು ನಾಶ ಮಾಡುವುದು. ಇದು ಚರ್ಮಕ್ಕೆ ಕಾಂತಿ ನೀಡುವುದು. ಹೀಗಾಗಿ ಚರ್ಮದಲ್ಲಿ ಮೂಡುವಂತಹ ಮೊಡವೆಗಳನ್ನು ನಿವಾರಣೆ ಮಾಡಲು ಇದು ಸಹಕಾರಿ.
ತಲೆಹೊಟ್ಟು ನಿವಾರಣೆ–ತಲೆಬುರುಡೆ ಒಣಗಿದಾಗ ತಲೆಹೊಟ್ಟಿನ ಸಮಸ್ಯೆಯು ಕಂಡುಬರುವುದು. ಇದರ ಪರಿಣಾಮವಾಗಿ ತುರಿಕೆ ಹಾಗೂ ಕಿರಿಕಿರಿ ಕಾಣಿಸುವುದು. ತಲೆಹೊಟ್ಟು ನಿವಾರಣೆ ಮಾಡಲು ನೀವು ಮಾರುಕಟ್ಟೆಯಲ್ಲಿ ಬಳಕೆ ಮಾಡುವಂತಹ ಶಾಂಪೂ ಹಾಗೂ ಕಂಡೀಷನರ್ ಬದಲಿಗೆ ಮೆಂತ್ಯೆ ಕಾಳು ಬಳಸಿದರೆ ತುಂಬಾ ಸಹಕಾರಿ.ತಲೆಹೊಟ್ಟು ಎಂದರೆ ತಲೆಬುರುಡೆಯಲ್ಲಿ ಕಾಣಿಸಿಕೊಳ್ಳುವ ಸತ್ತ ಚರ್ಮದ ಕೋಶಗಳು. ತಲೆಹೊಟ್ಟು ನಿವಾರಿಸಲು ತುಂಬಾ ಹಿಂದಿನಿಂದಲೂ ಮೆಂತ್ಯೆಕಾಳನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ.ರಾತ್ರಿ ವೇಳೆ ಸ್ವಲ್ಪ ಮೆಂತ್ಯೆ ಕಾಳನ್ನು ನೆನೆಸಲು ಹಾಕಿ ಮತ್ತು ಬೆಳಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಮೊಸರು ಸೇರಿದರೆ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯಬಹುದು.ಪೇಸ್ಟ್ ತಯಾರಾದ ಬಳಿಕ ನೀವು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಕೂದಲಿನ ಬುಡಕ್ಕೆ ಇದನ್ನು ಸರಿಯಾಗಿ ಉಜ್ಜಿ. 30 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ಕೆಲವೇ ದಿನಗಳಲ್ಲಿ ತಲೆಹೊಟ್ಟು ಮಾಯವಾಗುವುದು.
ಹೆರಿಗೆ ಸುಲಭವಾಗಲು—ಹೆರಿಗೆ ಉತ್ತೇಜಿಸಲು ಹಾಗೂ ಗರ್ಭಕೋಶದ ಸಂಕೋಚನಕ್ಕೆ ಮೆಂತ್ಯೆಕಾಳು ತುಂಬಾ ಲಾಭಕಾರಿ. ಇದು ಹೆರಿಗೆ ನೋವು ಕಡಿಮೆ ಮಾಡುವುದು.ಆದರೆ ನೀವು ಅತಿಯಾಗಿ ಮೆಂತ್ಯೆಕಾಳಿನ ಸೇವನೆ ಮಾಡಿದರೆ ಅದರಿಂದ ಗರ್ಭಪಾತ ಅಥವಾ ಅಕಾಲಿಕ ಹೆರಿಗೆ ಆಗುವ ಸಾಧ್ಯತೆಯು ಇರುವುದು. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.