ಸಜ್ಜೆ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರು ಸೇವಿಸಿ!

ಭಾರತದಲ್ಲಿ ಬೆಳೆಯುವ ಆಹಾರದಲ್ಲಿ ಸಜ್ಜೆಗೆ ಐದನೇ ಸ್ಥಾನವಿದೆ. ಇದರ ಮೂಲ ಸ್ಥಾನ ಆಫ್ರಿಕಾ. ಈ ಸಜ್ಜೆ 2000 ವರ್ಷಕ್ಕೂ ಹಿಂದೆ ಸಾಗುವಳಿಯಲ್ಲಿತ್ತು. ಸಜ್ಜೆಯನ್ನು ಇಂಗ್ಲಿಷ್‌ನಲ್ಲಿ ಪರ್ಲ್ ಮಿಲ್ಲೆಟ್ ಹಿಂದಿಯಲ್ಲಿ ಬಾಜ್ರಾ ಮತ್ತು ಕೆಲವು ಕಡೆ ಕಂಬು ಎಂದು ಕರೆಯುತ್ತಾರೆ. ಈ ಬೆಳೆ ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲಿ ಬೆಳೆಯಬಹುದು. ಸಜ್ಜೆಯಿಂದ ತಯಾರಾದ ರೊಟ್ಟಿ ಹಾಗೂ ಕಡುಬು ಉತ್ತಮ ಪೋಷಕಾಂಶಗಳ ಜೊತೆಗೆ ಸೇವಿಸಲು ಬಹಳ ರುಚಿ. ಅಕ್ಕಿ ರೊಟ್ಟಿ ಹಾಗೂ ಸಜ್ಜೆ ರೊಟ್ಟಿಯನ್ನು ಹೋಲಿಸಿ ನೋಡಿದರೆ ರುಚಿ ಹಾಗೂ ಆರೋಗ್ಯದಲ್ಲಿ ಸಜ್ಜೆಯದೇ ಮೇಲಿದೆ.

ಸಜ್ಜೆಯಲ್ಲಿ ಅಧಿಕ ನಾರಿನಾಂಶ ಹೊಂದಿರುವುದರಿಂದ ಇದರ ಸೇವನೆಯಿಂದ ಕರುಳು ಸ್ವಚ್ಛವಾಗುತ್ತದೆ. ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ರಕ್ತದಲ್ಲಿ ಕಡಿಮೆ ಆಗುತ್ತದೆ. ಸಜ್ಜೆಯ ಮತ್ತೊಂದು ಉತ್ತಮ ಅಂಶ ಅದರಲ್ಲಿರುವ ಕ್ಯಾಲ್ಷಿಯಂ. ಮೂಳೆಗಳ ಆರೋಗ್ಯಕ್ಕೆ ಇದು ಬಹಳ ಮುಖ್ಯ. ದಿನನಿತ್ಯ ಸರಾಸರಿ ದೇಹಕ್ಕೆ 500 ಮಿ.ಗ್ರಾಂ., 1000 ಮಿ.ಗ್ರಾಂ.ನಷ್ಟು ಕ್ಯಾಲ್ಷಿಯಂನ ಅಗತ್ಯವಿದೆ. ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಹಾಗೂ ವದ್ಧರಲ್ಲಿ ಅಧಿಕ ಕ್ಯಾಲ್ಷಿಯಂ ಬೇಕು.

ಹೀಗಾಗಿ ಇದರ ಸೇವನೆ ಅತ್ಯಗತ್ಯ. ಇದರ ಪೂರೈಕೆ ಕಡಿಮೆಯಾದಲ್ಲಿ ಮೂಳೆಗಳ ಆರೋಗ್ಯ ಕಡಿಮೆಯಾಗಿ ಆಸ್ಟಿಯೋಪೊರಾಸಿಸ್, ಬೆನ್ನು ನೋವು, ಕಾಲು ನೋವು ಇತ್ಯಾದಿ ಅನುಭವಿಸಬೇಕಾಗುತ್ತದೆ. ದಿನನಿತ್ಯ ಸಜ್ಜೆ ರೊಟ್ಟಿಯ ಸೇವನೆಯಿಂದ ದೇಹದ ಕೊಬ್ಬಿನ ಅಂಶ ಕಡಿಮೆಯಾಗಿ ತೂಕ ಹಾಗೂ ಆರೋಗ್ಯದಲ್ಲಿ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಸಂದೇಹವಿಲ್ಲ. ಈ ಕಿರುಧಾನ್ಯಗಳು ಎಲ್ಲರ ಮನೆಯಲ್ಲಿ ತಿರುಗಿ ಬಂದರೆ ಮುಂದಿನ ಜನಾಂಗದ ಆರೋಗ್ಯದಿಂದ ಕೂಡಿರುತ್ತದೆ.

Leave a Comment