ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಏನಾಗುತ್ತೆ ? ಒಳ್ಳೆಯ ಕೊಲೆಸ್ಟ್ರಾಲ್ ವೃದ್ಧಿ ಮಾಡೋದು ಹೇಗೆ.

ಯಾವಾಗ ನಾವೆಲ್ಲರೂ ನಮ್ಮ ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು, ಸೇವಿಸುವುದನ್ನು ಕಡಿಮೆ ಮಾಡಿ, ಪಿಜ್ಜಾ, ಬರ್ಗರ್ ಅಥವಾ ಜಂಕ್ ಫುಡ್, ಎಣ್ಣೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಲು ಶುರು ಮಾಡಿದೆವೆಯೋ, ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಕೂಡ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಂಡವು ಮತ್ತು ಹುಟ್ಟಿಕೊಳ್ಳುತ್ತವೆ

ಇತ್ತೀಚಿನ ಯುವ ಜನತೆಯರು, ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಜಂಕ್ ಫುಡ್‌ಗಳಂತಹ ಆಹಾರಗಳನ್ನೇ ಹೆಚ್ಚು ಸೇವಿಸುತ್ತಾ ಹೋಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಲು ಮುಕ್ತ ಆಹ್ವಾನ ನೀಡುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ!

ಕೊನೆಗೆ ಇದೇ ಜಂಕ್ ಫುಡ್‌ಗಳಿಂದಾಗಿ, ದೇಹದ ಹಲವು ಭಾಗಗಳಲ್ಲಿ ಬೊಜ್ಜು ಶೇಖರಣೆ ಆಗಿ, ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಜಾಸ್ತಿಗೊಂಡು, ಅದರಲ್ಲೂ ಮುಖ್ಯವಾಗಿ ಹೃದಯದ ಕಾರ್ಯ ಚಟುವಟಿಕೆಗೆ ತೊಂದರೆ ಮಾಡುತ್ತದೆ. ಇದರಿಂದ ದೇಹದ ತುಂಬಾ ಸರಿಯಾಗಿ ರಕ್ತ ಹರಿಯುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಯಾವುದೇ ಸಂದರ್ಭದಲ್ಲಿ ರಕ್ತದೊತ್ತಡ ಸಮಸ್ಯೆ ಎದುರಾಗಿ, ಹೃದಯಾಘಾತ ಅಥವಾ ಪಾರ್ಶ್ವವಾಯು ಸಮಸ್ಯೆ ಎದುರಾಗಬಹುದು. ಹಾಗಾಗಿ ಅತ್ಯುತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಬನ್ನಿ ಇಂದಿನ ಲೇಖನದಲ್ಲಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡುವ ಕೆಲವೊಂದು ಆಹಾರ ಪದಾರ್ಥಗಳ ಬಗ್ಗೆ ನೋಡೋಣ…

ಬಾರ್ಲಿ-ಬಾರ್ಲಿ ಅಥವಾ ಜವೆ ಗೋಧಿ ಎಂದು ಕರೆಯಲಾಗುವ ಈ ಧಾನ್ಯ ಪ್ರಪಂಚದಲ್ಲಿ ಪುರಾತನ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ಅತಿ ಹಳೆಯ ಧಾನ್ಯ ಎಂದೇ ಪ್ರಸಿದ್ದಿ ಪಡೆದುಕೊಂಡಿದೆ. ನಿಮಗೆ ಗೊತ್ತಿರಲಿ, ಇತರ ಎಲ್ಲಾ ಏಕದಳ ಧಾನ್ಯಗಳಿಗೆ ಹೋಲಿಸಿದರೆ ಬಾರ್ಲಿಯು ಬಹಳ ಪೌಷ್ಟಿಕಾಂಶವನ್ನು ಒಳಗೊಂಡ ಅತ್ಯದ್ಭುತ ಧಾನ್ಯ. ಇದಕ್ಕೆ ಮುಖ್ಯ ಕಾರಣ ಈ ಧಾನ್ಯದಲ್ಲಿ ಯಥೇಚ್ಛವಾದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಅಡಗಿವೆ.

ಹಾಗಾಗಿ ಬಾರ್ಲಿ ನೀರನ್ನು ಬೆಳಗಿನ ಉಪಹಾರದ ಮುಂಚೆ ಕುಡಿಯುವುದರಿಂದ, ಅದರಲ್ಲಿರುವ ಪೌಷ್ಟಿಕ ಸತ್ವಗಳು ದೇಹವನ್ನು ಬಹಳ ಬೇಗನೆ ಸೇರಿ ನಿಮ್ಮ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ, ಅಲ್ಲದೇ ಕಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಿಸಿ ಹೃದಯದ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.

ಓಟ್ಸ್–ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಓಟ್ಸ್ ಬಳಕೆ ಮಾಡಿ ಉಪ್ಪಿಟ್ಟು ತಯಾರು ಮಾಡಿ ಸೇವನೆ ಮಾಡಬಹುದು. ಇದರಿಂದ ದೇಹದ ತೂಕವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅದರಲ್ಲೂ ವಿಶೇಷವಾಗಿ, ಓಟ್ಸ್‌ಗಳಲ್ಲಿ ಕರಗುವ ನಾರಿನ ಅಂಶ ಹೆಚ್ಚಾಗಿರುವ ಕಾರಣ ನೈಸರ್ಗಿಕವಾದ ರೀತಿಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳುವಲ್ಲಿ ಇದು ತುಂಬಾ ನೆರವಾಗುತ್ತದೆ.

ಬೀನ್ಸ್-ಬೀನ್ಸ್‌ನ ಬೆಲೆ ಈಗ ಸ್ವಲ್ಪ ಕಡಿಮೆ ಆಗಿದೆ. ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ. ಹಾಗಾಗಿ ಇದೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ! ಆದಷ್ಟು ಬೀನ್ಸ್‌ನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ. ಇದಕ್ಕೆ ಮುಖ್ಯ ಕಾರಣ ಬೀನ್ಸ್ ನಲ್ಲಿ ವಿಟಮಿನ್ ಅಂಶಗಳ ಪ್ರಮಾಣ ಹೆಚ್ಚಾಗಿ ಸಿಗುತ್ತದೆ.

ಇದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ದಿನದ ಅವಶ್ಯಕತೆಗೆ ಅನುಗುಣವಾದ ಕ್ಯಾಲೋರಿಗಳು, ಒಳ್ಳೆಯ ಕೊಬ್ಬಿನ ಅಂಶ, ಕಾರ್ಬೋಹೈಡ್ರೇಟ್ ಅಂಶ, ನಾರಿನ ಅಂಶ, ನೈಸರ್ಗಿಕವಾದ ಸಕ್ಕರೆ ಅಂಶ, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪಾಸ್ಪರಸ್, ಪೊಟಾಸಿಯಂ, ಫೋಲೆಟ್ ಇತ್ಯಾದಿಗಳು ಸಿಗುತ್ತವೆ. ಇವುಗಳೆಲ್ಲಾ ನಮ್ಮ ಆರೋಗ್ಯಕ್ಕೆ ಊಹೆಗೂ ಮೀರಿದ ಪ್ರಯೋಜನಗಳನ್ನು ಒದಗಿಸುತ್ತವೆ.

ಇನ್ನು ನಿಯಮಿತವಾಗಿ ಬೀನ್ಸ್‌ನ್ನು ದೈನಂದಿನ ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿ ಕೊಳ್ಳುವುದರಿಂದ, ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಪ್ರಮಾಣವನ್ನು ನಿಯಂತ್ರಿಸಿಕೊಳ್ಳಬಹುದು, ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿ ಕೊಂಡಂತಾಗುತ್ತದೆ

ಮೀನು ಸೇವಿಸಿ!ನಿಮಗೂ ಗೊತ್ತಿರಬಹುದು, ಕರಾವಳಿ ಕಡೆಯ ಜನರಿಗೆ ಮೀನು ಇಲ್ಲಾಂದ್ರೆ ಊಟಾನೇ ಸೇರಲ್ಲ! ಅವರಿಗೆ ಎರಡು ದಿನಕ್ಕೆ ಒಮ್ಮೆ ಆದರೂ ಮೀನಿನ ಪದಾರ್ಥ ಬೇಕೇಬೇಕು. ಬಹುತೇಕ ಮಾಂಸಾಹಾರಿ ಜನರು ಇವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಒಂದು ಕೆಲ್ಲದಲ್ಲಿ ನೋಡುವುದಾದರೆ, ಇದರಿಂದ ಆರೋಗ್ಯಕ್ಕೆ ಲಾಭಗಳೇ ಜಾಸ್ತಿ!

ಮುಖ್ಯವಾಗಿ ಮೀನಿನಲ್ಲಿ ಅಪಾರ ಪ್ರಮಾಣದಲ್ಲಿ, ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಅಡಗಿದೆ, ಅದರಲ್ಲೂ ವಿಶೇಷವಾಗಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಕೂಡ ಇದರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ನೈಸರ್ಗಿಕವಾಗಿ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಹೋರಾಡಿ ನಮ್ಮ ಆರೋಗ್ಯವನ್ನು ಮತ್ತು ಹೃದಯದ ಕಾರ್ಯ ಚಟುವಟಿಕೆಯನ್ನು ವೃದ್ಧಿಸುತ್ತದೆ.

ಒಣ ಬೀಜಗಳು–ಒಣಬೀಜಗಳು ಅಥವಾ ಡ್ರೈಫ್ರೂಟ್ಸ್ ಸ್ವಲ್ಪ ದುಬಾರಿ ಬಿಟ್ಟರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮುಖ್ಯವಾಗಿ ನೆನೆಸಿಟ್ಟ ಬಾದಾಮಿ, ವಾಲ್ ನಟ್ಸ್ , ಒಣಖರ್ಜೂರ, ಇತರ ಕೆಲವು ಬೀಜಗಳು ಹೃದಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ದಿನಕ್ಕೆ ಸ್ವಲ್ಪ ಒಣ ಬೀಜಗಳನ್ನು ತಿಂದರೂ ಸಾಕು, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸ ಬಹುದು! ಅಷ್ಟೇ ಅಲ್ಲದೇ ಇದರಲ್ಲಿ ಇರುವಂತಹ ಇತರ ಹಲವಾರು ರೀತಿಯ ಪೋಷಕಾಂಶಗಳು ಕೂಡ ಹೃದಯದ ಆರೋಗ್ಯವನ್ನು ಕಾಪಾಡುವುದು.

Leave a Comment