ಗರುಡ ಶಕುನ ಎಂದರೇನು ತಪ್ಪದೇ ಓದಿ

0 1

ಶಕುನ ಪದಕ್ಕೆ ಪಕ್ಷಿ, ಹದ್ದು, ಶುಭ ಚಿಹ್ನೆ ಎಂಬ ಹಲವು ಅರ್ಥಗಳಿವೆ.ಒಳಿತು – ಕೆಡಕುಗಳ ಸೂಚನೆ (ಭವಿಷ್ಯದ ಘಟನೆಯೊಂದರ ಸೂಚಕ ಎಂದೂ ಕರೆಯಲಾಗುತ್ತದೆ).ಜನಪದರ ಜೀವನದಲ್ಲಿ ಒಂದು ಪ್ರಮುಖ ಘಟನೆಯಾಗಿ ಸ್ಥಾಪಿತವಾಗಿರುವ ರೂಢಿಮೂಲವಾದ ಶಕುನದ ಹುಟ್ಟನ್ನು ನಾವು ಇಲ್ಲೇ ಕಂಡುಕೊಳ್ಳಬಹುದೆಂದು ತೋರುತ್ತದೆ. ‘ಸೂಚಕ’ ಎಂಬರ್ಥದಲ್ಲಿ ಬಳಕೆಯಾದ ಶಕುನ ಕ್ರಮೇಣ ಜನರ ನಂಬಿಕೆಗಳಿಗನುಗುಣವಾಗಿ ಅರ್ಥ ರೂಪಾಂತರವಾಗಿ ಪರಿವರ್ತನೆಗೊಂಡಿದೆ.

ಜನಪದ ಜೀವನದಲ್ಲಿ ಹಾಸುಹೊಕ್ಕಾಗಿರುವ ಶಕುನ ದಿನನಿತ್ಯದ ಆಗುಹೋಗುಗಳಲ್ಲಿ ತನ್ನ ಪಾತ್ರವನ್ನು ಕಾಲಾನುಕಾಲದಿಂದಲೂ ನಿರ್ವಹಿಸುತ್ತಾ ಬಂದಿದೆ. ಕೆಲವೊಮ್ಮೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸಲು ಇನ್ನು ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕುಂದಿಸುವಲ್ಲೂ ಶಕುನದ ಪಾತ್ರ ಗಮನಾರ್ಹವಾದುದಾಗಿದೆ.ನಮ್ಮ ಜನಪದ ಪರಂಪರೆಯ್ಲಲಿ ಶಕುನಕ್ಕೆ ಸಂಬಂಧಿಸಿದ ನಡವಳಿಕೆಯೊಂದು ಈ ರೀತಿ ಕಂಡು ಬರುತ್ತದೆ.

ಬುಡುಬುಡಿಕೆ ಸಂಪ್ರದಾಯಕ್ಕೆ ಸೇರಿದ ವ್ಯಕ್ತಿ ಸರಿರಾತ್ರಿಯಲ್ಲಿ ಸ್ಮಶಾನಕ್ಕೆ ಹೋಗಿ ಹಾಲಕ್ಕಿ ಎಂಬ ಶಕುನದ ಹ್ಕಕಿ ನುಡಿಯುವುದನ್ನು ಕೇಳುತ್ತಾನೆ. ಆನಂತರ ಬೆಳಗಿನ ಜಾವದಲ್ಲಿ ಬುಡುಬುಡಿಕೆಯನ್ನು ನುಡಿಸುತ್ತ ಊರಿನ ಕೇರಿ ಕೇರಿಗಳಲ್ಲಿ ಸುತ್ತುತ್ತ ಹಾಲಕ್ಕಿ ಶಕುನವನ್ನು ನುಡಿಯುತ್ತಾನೆ. ಅವನು ನುಡಿದಂತೆ ಆಗುತ್ತದೆ ಎಂಬ ನಂಬಿಕೆ ಇರುವುದರಿಂದ – ಶಕುನ ಕೆಟ್ಟದ್ದಾದರೆ ಅದಕ್ಕೆ ಪರಿಹಾರವನ್ನು ಸೂಚಿಸುತ್ತಾನೆ. ಜನರು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಬುಡುಬುಡಿಕೆ ಕೃಷ್ಣ ಪರಂಪರೆಗೆ ಸೇರಿದ್ದೆಂಬ ನಂಬಿಕೆ ಇದೆ.

ಶಕುನ ಮುಂದಾಗುವುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಮುಂದಾಗುವುದು ಅಂದರೆ ಅದು ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು. ಈ ಹಿನ್ನೆಲೆಯಲ್ಲಿ ಒಳ್ಳೆಯ ಶಕುನ, ಕೆಟ್ಟ ಶಕುನ ಎಂದು ಹೆಸರಿಸುವುದು ವಾಡಿಕೆ. ಮನೆಯಲ್ಲಿ ಯಾರಾದರೂ ಮಾತನಾಡುತ್ತಿದ್ದಾಗ ಹಲ್ಲಿ ಏನಾದರೂ ಲೊಚಗುಟ್ಟಿದರೆ ಆ ಮಾತು ನಿಜವಾಗುತ್ತದೆ ಎಂದು ನಂಬಿ ಕೃಷ್ಣ ಕೃಷ್ಣ ಅಂತಲೋ, ರಾಮ ರಾಮ, ಶಿವ ಶಿವ ಎಂತಲೋ ಹೇಳುವುದು ವಾಡಿಕೆ. ದೇವರನ್ನು ನೆನೆಯುವುದು ಮತ್ತು ಆ ಮೂಲಕ ಆಡಿದ ಮಾತನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದು ಸಹಜವೇ ಆಗಿದೆ. ಆದರೆ, ಅದನ್ನೊಂದು ಸಂಪ್ರದಾಯವಷ್ಟೇ ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು.

ಅದೇ ಹಲ್ಲಿ ಮೈಮೇಲೆ ಬಿದ್ದರೆ ಕೆಟ್ಟದ್ದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ಹಾಗಾಗಿ ಇದೊಂದು ಕೆಟ್ಟ ಶಕುನವೇ ಹೌದೆಂದು ನಂಬಲಾಗಿದೆ. ಈ ಹಲ್ಲಿ ದೋಷ ಪರಿಹಾರಕ್ಕಾಗಿ ಆ ವ್ಯಕ್ತಿ ತಣ್ಣೀರಿನಲ್ಲಿ ಸ್ನಾನ ಮಾಡಿ, ದೇವರಿಗೆ ತುಪ್ಪದ ದೀಪ ಹಚ್ಚಬೇಕು ಮತ್ತು ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಹೋಗಿಬರುವುದು.
ಅದಾಗದಿದ್ದರೆ ಕೊನೆ ಪಕ್ಷ ಕಾಮಾಕ್ಷಿ ದೇವಾಲಯದ ಹಲ್ಲಿ ದರ್ಶನ ಮಾಡಿದವರನ್ನು ಮಾತನಾಡಿಸಿದರೆ ಹಲ್ಲಿ ಬಿದ್ದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ವಾಸ್ತವವಾಗಿ ಹಲ್ಲಿ ಒಂದು ವಿಷಪೂರಿತ ಪ್ರಾಣಿ. ಆ ಹೆದರಿಕೆಯೇ ಈ ರೀತಿಯ ಕೆಟ್ಟ ಶಕುನ ಎಂಬುದಕ್ಕೆ ಭಾಜನವಾಗಿದೆ ಎಂದೆನ್ನಬಹುದು.

ಬೆಳಗಾಗೆದ್ದು ನರಿ ಮುಖ ನೋಡಿದರೆ ಅದೊಂದು ಒಳ್ಳೆಯ ಶಕುನ ಎಂಬ ನಂಬಿಕೆ ಪ್ರಚಲಿತವಿದೆ. ನರಿ ತನ್ನ ಕಿಲಾಡಿತನಕ್ಕೆ ಹೆಸರಾಗಿರುವುದರಿಂದ ನಮ್ಮ ಗ್ರಾಮೀಣ ವಲಯದಲ್ಲಿ ಈ ರೀತಿ ನಂಬಿಕೆ ಬರಲು ಕಾರಣವಾಗಿದೆ. ಹಾಗಾಗಿಯೇ ಕೆಲವರ ಮನೆಗಳಲ್ಲಿ ಜೋಡಿ ನರಿಗಳ ಭಾವಚಿತ್ರವನ್ನು ಗೋಡೆಗೆ ತಗುಲಿ ಹಾಕುವುದುಂಟು. ಹಾಗೆಯೇ ನರಿಯು ಹೊಲ, ತೊಲ, ಗದ್ದೆಗಳಲ್ಲಿ ಊಳಿಡುವುದು ಶುಭ ಶಕುನ ಅಂತ ಕೆಲವು ಪ್ರದೇಶಗಳಲ್ಲಿ ನಂಬಿಕೆ ಇದೆ.

ರಾತ್ರಿ ಹೊತ್ತು ನಾಯಿ ಯಾವುದಾದರೊಂದು ಮನೆ ಮುಂದೆ ತನ್ನ ಮುಖವನ್ನು ಆಗಸಕ್ಕೆ ಮಾಡಿ ಊಳಿಡುವುದು (ಕೂಗುವುದು) ಕೆಟ್ಟ ಶಕುನವೆಂದು ನಂಬಲಾಗಿದೆ. ಅದು ಹಾಗೆ ಊಳಿಡಲು ಮುಖ್ಯ ಕಾರಣ -ಯಮಧರ್ಮರಾಯ ಕೋಣದ ಮೇಲೆ ಕುಳಿತುಕೊಂಡು ಬರುತ್ತಿರುವುದು ಅದರ ಕಣ್ಣಿಗೆ ಕಾಣಿಸುವುದೆಂದೂ, ಅದರಿಂದ ಆ ಮನೆಯಲ್ಲಿ ಅಥವಾ ಆ ಬೀದಿಯಲ್ಲಿ ಯಾರಾದರೂ ಸಾಯುವುದು ನಿಶ್ಚಿತವೆಂಬ ನಂಬಿಕೆಯ ಮೇಲೆ ಇದೊಂದು ಕೆಟ್ಟ ಶಕುನವೆಂದು ಪ್ರಚಲಿತದಲ್ಲಿದೆ.

ವಿಷಯವೊಂದನ್ನು ಕುರಿತು ಮಾತನಾಡುತ್ತಿರುವಾಗ ಕತ್ತೆ ಕಿರುಚಿದರೆ ಅದೊಂದು ಶುಭಶಕುನವೆಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲಿಗಾದರೂ ಪ್ರಯಾಣ ಹೊರಟಾಗ ಬೆಕ್ಕು ಅಡ್ಡಬಂದರೆ ಅಪಶಕುನವೆಂಬ ಪ್ರತೀತಿ ಇಂದಿಗೂ ಗಾಢವಾಗಿದೆ ಇತ್ಯಾದಿ.

ಇದೇ ರೀತಿ ಕೆಲವೊಂದು ಪಕ್ಷಿಗಳನ್ನು ಕುರಿತು ಶಕುನಗಳನ್ನು ಪರಿಗಣಿಸುವುದುಂಟು. ಮನೆಯ ಮುಂದೆ ಅಥವಾ ಮೇಲೆ ಕುಳಿತು ಕಾಗೆ ಕೂಗಿದರೆ ಮನೆಗೆ ನೆಂಟರು ಬರುವುದರ ಮುನ್ಸೂಚನೆ ಎಂಬ ಪ್ರತೀತಿ ಇದೆ. ಕಾಗೆಯೊಂದು ಮನೆಯೊಳಕ್ಕೆ ನುಗ್ಗಿದರೆ ಅದೊಂದು ಕೇಡು ಶಕುನವೆಂದು ಪರಿಗಣಿಸಿ, ಪುರೋಹಿತರಿಂದ ಪುಣ್ಯಾರ್ಚನೆ ಮಾಡಿಸುವುದುಂಟು. ಹಾಗೆಯೇ ಕಾಗೆ ವ್ಯಕ್ತಿಯ ತಲೆಗೆ ಬಡಿದರೆ ಅದು ಕೆಟ್ಟ ಶಕುನವೆಂಬ ನಂಬಿಕೆ ಚಾಲ್ತಿಯಲ್ಲಿದೆ.

ಗೂಬೆ ಮನೆಯ ಮೇಲೆ ಕೂತರೆ ಕೆಟ್ಟ ಶಕುನದ ಸೂಚಕವೆಂದು ಗ್ರಾಮೀಣ ವಲಯಗಳಲ್ಲಿ ನಂಬಿಕೆ ಇದೆ. ಅದು ಕೂತಂಥ ಮನೆಗೆ ದಾರಿದ್ರ್ಯ ತಟ್ಟುವುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಶಕುನ ರೂಢಿಯಲ್ಲಿರುವುದು ಕಂಡು ಬರುತ್ತದೆ. ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವ ಅದರ ಗುಣಲಕ್ಷಣವನ್ನು ಈ ರೀತಿ ಅರ್ಥೈಸಲಾಗಿದೆ ಎಂದು ನಾವು ಭಾವಿಸಬಹುದು.

Leave A Reply

Your email address will not be published.