ಕೋಲಾರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಕುರುಡುಮಲೆ ಗ್ರಾಮದಲ್ಲಿರುವ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದೆ. ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಅಂದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿಸಲಾದ ವಿನಾಯಕ ಇದಾಗಿದೆ.
ಸಾಲಿಗ್ರಾಮ ಶಿಲಾ ಗಣ-ಕೋಲಾರ: ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿ ಇಂದಿಗೂ ತನ್ನ ಶಕ್ತಿ, ಪ್ರಸಿದ್ಧಿಯಿಂದ ಹೆಸರು ಪಡೆದಿದೆ. ಜಗದೊಡೆಯ, ಕೌಂಡಿನ್ಯ ಮಹಾ ಋಷಿಯಿಂದ ಪೂಜಿಸಲ್ಪಟ್ಟ ಈ ಗಣೇಶ ನಾಲ್ಕು ಯುಗಗಳಿಂದ ಚಮತ್ಕಾರ ನಡೆಸುತ್ತಿದ್ದಾನೆ. ವಿಶ್ವದಲ್ಲೇ ಇರುವ ಏಕೈಕ ಸಾಲಿಗ್ರಾಮ ಶಿಲೆಯ ಗಣಪನ ಎದುರು ಬೇಡಿದರೆ ಇಷ್ಟಾರ್ಥಗಳು ಎಲ್ಲವೂ ಈಡೇರುತ್ತವೆ ಎಂಬುವುದು ಇಲ್ಲಿನ ನಂಬಿಕೆ. ಹಾಗಿದ್ದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿತವಾದ ಶಕ್ತಿಶಾಲಿ ಸಾಲಿಗ್ರಾಮ ಶಿಲೆಯ ದೊಡ್ಡ ಗಣೇಶ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನೋಡಿದ ನೋಟದಲ್ಲೇ ಭಕ್ತಿ ಪರವಶವಾಗುವ ಮೂರ್ತಿ. ಕಣ್ಣಿಗೆ ಕಟ್ಟಿದಂತಿರುವ 18 ಅಡಿ ಸಾಲಿಗ್ರಾಮ ಶಿಲೆಯ ಗಣಪ. ದೇವಾಲಯದ ಸುತ್ತಲೂ ಬೆಟ್ಟದ ಸಾಲು. ಇದಿರುವುದು ಬೇರೆ ಎಲ್ಲೂ ಅಲ್ಲ, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುರುಡುಮಲೆ ಗ್ರಾಮದಲ್ಲಿ. ಕೂಟಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ಧವಾದ ಗಣೇಶನ ದೇವಾಲಯವಿದು.
ಐತಿಹಾಸಿಕ ಹಿನ್ನೆಲೆ-ಕೋಲಾರದಿಂದ ಸುಮಾರು 45 ಕಿ.ಮೀ ದೂರದಲ್ಲಿನ ಕುರುಡುಮಲೆ ಗ್ರಾಮದಲ್ಲಿರುವ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದೆ. ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಅಂದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿಸಲಾದ ವಿನಾಯಕ ಇದಾಗಿದೆ. ಇನ್ನು ಕೂಟಾದ್ರಿ ಎಂದು ಹೆಸರು ಬರಬೇಕಾದರೆ, ಹಿಂದೆ ದೇವತೆಗಳ ಸಾಕ್ಷಿಯಾಗಿ ತ್ರಿಮೂರ್ತಿಗಳು ತ್ರಿಪುರಾಸುರನನ್ನು ಸಂಹಾರ ಮಾಡಿದಾಗ ಕೋಟ್ಯಾನು ದೇವತೆಗಳು ಸೇರಿದ್ದು, ಈ ಕುರುಡುಮಲೆಯಲ್ಲಿಯೇ. ಈ ಒಂದು ಕಾರಣಕ್ಕಾಗಿ ಕೂಟಾದ್ರಿ ಎಂದು ಹೆಸರನ್ನು ಪಡೆದುಕೊಂಡಿತು.
ಶಿಲ್ಪಕಲೆ-ವಿಜಯ ನಗರ ಸಾಮ್ರಾಜ್ಯದ ಸುಂದರ ಶಿಲ್ಪಕಲೆ-ಈ ಹಿಂದೆ ಬರಿ ಮಹಾಗಣಪನ ಮೂರ್ತಿ ಮಾತ್ರ ಈ ಸ್ಥಳದಲ್ಲಿತ್ತು. ಗಣಪನ ಮೂರ್ತಿಗೆ ಯಾವುದೇ ದೇವಸ್ಥಾನ ಇರಲಿಲ್ಲ. ಬಯಲಿನಲ್ಲಿ ಬೆಟ್ಟದ ತಪ್ಪನಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಅಂದರೆ ಮಳೆ ಬಂದಾಗ ಮಹಾಗಣಪತಿ ಮೇಲೆ ಒಂದು ಹನಿಯೂ ನೀರು ಬೀಳುತ್ತಿರಲಿಲ್ಲ ಎನ್ನುವ ಪ್ರತೀತಿ ಇದೆ. ಹೀಗೆ ಕೃತ ಯುಗ, ತೇತ್ರಾಯುಗ, ದ್ವಾಪರ, ಯುಗದಲ್ಲಿ ಈ ಸ್ವಾಮಿಗೆ ಯಾವುದೇ ದೇವಸ್ಥಾನವಿರಲಿಲ್ಲ. ಹೀಗಿರುವಾಗ ಕಲಿಯುಗದ ಕಾಲದಲ್ಲಿ ಶ್ರೀಕೃಷ್ಣದೇವರಾಯರು ಈ ಮಹಾಗಣಪತಿಯ ದರ್ಶನ ಪಡೆಯಲು ಬಂದಾಗ, ಈ ಗಣಪನಿಗೆ ದೇವಸ್ಥಾನ ಕಟ್ಟಿಸಿ ಹೋದರೆಂಬ ಪ್ರತೀತಿ ಕೂಡ ಇಲ್ಲಿದೆ. ಹೀಗಾಗಿ ಈ ದೇವಸ್ಥಾನ ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಸುಂದರ ಶಿಲ್ಪಕಲೆಯನ್ನುಳ್ಳ ದೇವಸ್ಥಾನವಾಗಿ ನಿರ್ಮಾಣ ಮಾಡಲಾಗಿದೆ. ಜಕ್ಕಣಾಚಾರಿಯಿಂದ ಸುಂದರ ಶಿಲ್ಪಕಲೆಯನ್ನೊಳಗೊಂಡ ದೇವಾಲಯವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.
ಶ್ರೀರಾಮಚಂದ್ರ, ಶ್ರೀಕೃಷ್ಣ, ಪಾಂಡವರಿಗೂ ಜಯ ತಂದುಕೊಟ್ಟಿದ್ದಾನೆ ಈ ಗಣಪ!-ದೇವಾನು ದೇವತೆಗಳಲ್ಲಿ ಮಹಾನ್ ದೇವರಾಗಿರುವ ಗಣೇಶನಿಗೆ, ತೇತ್ರಾಯುಗದಲ್ಲಿ ಶ್ರೀರಾಮಚಂದ್ರ ರಾವಣನ ಮೇಲೆ ಯುದ್ದಕ್ಕೆ ಹೋಗುವ ಮುನ್ನ, ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದನೆಂಬ ಪ್ರತೀತಿ ಇದೆ. ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದರಿಂದಲೇ ಶ್ರೀರಾಮಚಂದ್ರನಿಗೆ ಯುದ್ದದಲ್ಲಿ ಯಶಸ್ಸು ಸಿಕ್ಕಿದ್ದು ಎಂದು ಹೇಳಲಾಗುತ್ತದೆ.
ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಇಲ್ಲಿನ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದರು. ಇದಲ್ಲದೆ ಚೌತಿಯಂದು ಚಂದ್ರನನ್ನು ನೋಡಿದ ಶ್ರೀಕೃಷ್ಣ ಶಮಂತಕಮಣಿಯನ್ನು ಕದ್ದನೆಂಬ ಅಪವಾದವನ್ನು ಈ ಗಣೇಶನ ದರ್ಶನದಿಂದಲೇ ಬಗೆಹರಿಸಿಕೊಂಡ ಎನ್ನುವ ಪುರಾಣಗಳಲ್ಲಿದೆ. ಅದೇ ರೀತಿ ಈಗಲೂ ಚೌತಿಯ ಚಂದ್ರನ ದರ್ಶನ ಮಾಡಿದವರು ಗಣೇಶನ ದರ್ಶನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗಿದೆ. ಹೀಗೆ ಈ ಮಹಾಗಣಪನ ಕೃಪೆಗೆ ಮೂರು ಕಾಲದ ದೇವಾನು ದೇವತೆಗಳು ಪಾತ್ರರಾಗಿದ್ದಾರೆ.
ರಾಮಾಯಣದಲ್ಲಿ ಆಂಜನೇಯ ಲಂಕೆಯಲ್ಲಿದ್ದ ಸೀತಾ ದೇವಿಗೆ ರಾಮನ ಚಿತ್ರವಿರುವ ಉಂಗುರವನ್ನು ನೀಡಿದ್ದು. ಪಾಂಡವರು ಕೌರವರ ಮೇಲೆ ಯುದ್ಧ ಮಾಡಿದ ದೃಶ್ಯಗಳು ಈ ದೇವಾಲಯದ ಕೆತ್ತನೆಯಲ್ಲಿ ಕಾಣಬಹುದು. ಇದಲ್ಲದೆ ಶ್ರೀಕೃಷ್ಣ ದೇವರಾಯ ಮನೆ ದೇವತೆಯಾದ ಶ್ರೀ ಚಾಮುಂಡೇಶ್ವರಿಯ ಚಿತ್ರವನ್ನು ಇಲ್ಲಿ ಕೆತ್ತಲಾಗಿದೆ.
ಸಾಲಿಗ್ರಾಮ ಶಿಲಾ ಗಣಪ-ದೇವಸ್ಥಾನಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲಿ ಬೆಟ್ಟವೂ ಕೂಡ ಇದೆ. ಕೌಂಡಿನ್ಯ ಮಹರ್ಷಿಗಳ ತಪಸ್ಸು ಮಾಡಿರುವಂತಹ ಸ್ಥಳ ಇದಾಗಿದ್ದು, ಕೌಂಡಿನ್ಯ ನದಿಯ ಉಗಮ ಸ್ಥಾನವೂ ಇದಾಗಿದೆ. ಹೀಗಾಗಿ ಪ್ರಪಂಚದಲ್ಲೇ ಏಕೈಕ ಸಾಲಿಗ್ರಾಮ ಶಿಲೆಯ ಮಹಾಗಣಪನಿಗೆ ಮೊದಲ ಪೂಜೆ ಈ ಕೌಂಡಿನ್ಯ ಮಹರ್ಷಿಗಳಿಂದಲೇ ಎನ್ನುವ ಪ್ರತೀತಿ ಕೂಡ ಈ ಕುಟಾದ್ರಿ ಕುರುಡುಮಲೆಯಲ್ಲಿದೆ. 15 ತಲೆಮಾರುಗಳಿಂದ ಇಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜ್ಯವೇ ಅಲ್ಲದೆ ನೆರೆ ರಾಜ್ಯದ ಸಾವಿರಾರು ರಾಜಕಾರಣಿಗಳು, ವಿವಿಧ ಪಕ್ಷಗಳ ಮುಖಂಡರು ಇಲ್ಲಿಗೆ ಬರುತ್ತಾರೆ. ಇಲ್ಲಿ ಬಂದು ಪೂಜೆ ಸಲ್ಲಿಸಿದ ನಂತರವಷ್ಟೇ ಯಾವುದೇ ಕಾರ್ಯವನ್ನು ಆರಂಭ ಮಾಡುವುದು ಎಂಬ ನಂಬಿಕೆ ಕೂಡ ಇಲ್ಲಿ ಇದೆ.
ಹಲವು ದೋಷಗಳನ್ನು ಪರಿಹರಿಸುವ ಶಕ್ತಿ ಕೇಂದ್ರ!-ಇಲ್ಲಿನ ಚಕಿತಗಳು ಅಂದರೆ ನಾಗದೋಷಗಳು ಇಷ್ಟಾರ್ಥಗಳು ಇಲ್ಲಿ ಬಗೆಹರಿಯುತ್ತವೆ ಅನ್ನೋದಕ್ಕೆ ಇಂದಿಗೂ ಅದೆಷ್ಟೋ ಜೀವಂತ ನಿದರ್ಶನಗಳಿವೆ. ಇಲ್ಲಿನ ಮಹಾಗಣಪನ ಹೊಟ್ಟೆಯಲಿ ಸರ್ಪ ಇರುವುದರಿಂದ, ಸರ್ಪ ದೋಶವಿರುವವರು ಇಲ್ಲಿಗೆ ಒಮ್ಮೆ ಭೇಟಿ ನೀಡಿ, ಇಲ್ಲಿನ ಏಕೈಕ ಸಾಲಿಗ್ರಾಮ ಶಿಲೆಯ ಗಣಪನಿಗೆ ಪೂಜೆ ಸಲ್ಲಿಸಿದರೆ ಹಲವಾರು ಸರ್ಪ ದೋಷಗಳು ನಿವಾರಣೆಯಾಗುತ್ತವೆ.
ಅಲ್ಲದೆ ಸಂತಾನ, ಉದ್ಯೋಗ ಇನ್ನಿತರ ಸಂಕಷ್ಟಗಳ ನಿವಾರಣೆಗಾಗಿ, ಪರಿಹಾರಕ್ಕಾಗಿ ಇಲ್ಲಿ ಸುಮಾರು 48 ದಿನಗಳ ಕಾಲ ಮಂಡಲ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ ಗಣೇಶ ಚತುರ್ಥಿಯಂದು ಐದು ದಿನಗಳ ಕಾಲ ಬ್ರಹ್ಮರಥೋತ್ಸವಗಳು, ಪುಷ್ಪಪಲ್ಲಕ್ಕಿ, ಲಕ್ಷ್ಮೀಗಣಪತಿ ಉತ್ಸವಗಳು ನಡೆಯುತ್ತವೆ. ಗಣೇಶ ಚತುರ್ಥಿಯ ಹಿಂದಿನ ದಿನದಂದು ಗೌರಿ ಹಬ್ಬದ ಸಲುವಾಗಿ ಅಂಕುರಾರ್ಪಣೆ ಪೂಜೆ ನಡೆಯುತ್ತದೆ. ಗಣಪತಿ ದಿನದ ರಾತ್ರಿ ಲಕ್ಷ್ಮೀಗಣಪತಿಯ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಇದಾದ ನಂತರ ಗಣಪತಿ ರಥೋತ್ಸವ ನಡೆಯುತ್ತದೆ. ನಂತರ ದೀಪೋತ್ಸವ, ವಸಂತೋತ್ಸವ, ಪುಷ್ಪಪಲ್ಲಕ್ಕಿ ಶೈನೋತ್ಸವ, ಹೀಗೆ ಹಬ್ಬದ ಹಿಂದಿನ ದಿನದಿಂದ ಸುಮಾರು 5 ದಿನಗಳ ವರೆಗೆ ಇಲ್ಲಿ ವಿಶೇಷ ಪೂಜೆಗಳನ್ನು ಮಹಾಗಣಪನಿಗೆ ಮಾಡಲಾಗುತ್ತದೆ.
ಕುರುಡುಮಲೆ ಗಣಪತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು-ನಾಲ್ಕು ಯುಗಗಳಿಂದ ಪೂಜಿಸಲ್ಪಡುತ್ತಿರುವ ಕುರುಡುಮಲೆ ಗಣಪತಿಯು ಕಲಿ ಯುಗದಲ್ಲೂ ತನ್ನ ಚಮತ್ಕಾರವನ್ನು ತೋರಿಸುತ್ತಿದ್ದಾನೆ. ಹಾಗಾಗಿನೆ ಇಲ್ಲಿಗೆ ಈ ವಿಶೇಷ ದಿನದಲ್ಲಿ ಗಣೇಶನ ದರ್ಶನಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಬರ್ತಾರೆ. ಇಲ್ಲಿಯ ಗಣಪನ ವಿಶೇಷವಾದ ಚಮತ್ಕಾರ ಅಂದರೆ ಕೇತುವಿನ ದೋಷ ಪರಿಹಾರವಾಗುತ್ತದೆ. ಇದರಿಂದಾಗಿ ನೆರೆ ರಾಜ್ಯಗಳಿಂದ, ತುಂಬಾ ದೂರದಿಂದ ಇಲ್ಲಿಗೆ ಭಕ್ತಾಧಿಗಳು ಬರುತ್ತಾರೆ. ಅದಕ್ಕಾಗಿ ಇಂದಿಗೂ ರಾಜಕೀಯ ನಾಯಕರ ದಂಡೇ ಈ ಗಣೇಶನಿಗೆ ಭಕ್ತರು. ಮಾತ್ರವಲ್ಲದೆ ನೆರೆಯ ರಾಜ್ಯಗಳ ಚುನಾವಣೆ ಸಂದರ್ಭದಲ್ಲೂ ಕೂಡ ಈ ಗಣೇಶನಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಹಾಗಾಗಿ ಇತರೆ ರಾಜ್ಯದ ಭಕ್ತರಿಗೂ ಈ ವಿನಾಯಕ ಅಚ್ಚುಮೆಚ್ಚು.
ಈ ಕುರುಡುಮಲೆ ಗಣೇಶನಿಗೆ ರಾಜ್ಯದ ದೇವೇಗೌಡರ ಆದಿಯಾಗಿ, ಎಸ್.ಎಂ. ಕೃಷ್ಣ, ಪರಮೇಶ್ವರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ, ಸೇರಿದಂತೆ ಬಹುತೇಕ ಎಲ್ಲಾ ನಾಯಕರುಗಳೂ ತಮ್ಮ ಪ್ರತಿ ಚುನಾವಣೆಗೂ ಮೊದಲು ತಮ್ಮ ರಾಜಕೀಯ ಕಾರ್ಯ ಆರಂಭಿಸುವ ಮೊದಲು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗೋದು ವಾಡಿಕೆ. ಜತೆಗೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲರಂತ ರಾಷ್ಟ್ರೀಯ ನಾಯಕರುಗಳು ಈ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.