ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!

ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್ ಕಾವೇರಿ ನೀರು ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ಬರುತ್ತದೆ ಬಿಡಿ ಅನ್ನುತ್ತೀರಾ. ಆದರೆ ನಾವಿಲ್ಲಿ ಚರ್ಚಿಸುತ್ತಿರುವುದು ನೀರಿನ ಬಗ್ಗೆಯಾದರೂ ‘ಕಾವೇರಿ’ಗೆ ಸಂಬಂಧಪಟ್ಟಿಲ್ಲ. ಬದಲಿಗೆ ಕುಡಿಯುವ ತಣ್ಣನೆಯ ನೀರಿನ ಬಗ್ಗೆ.

ಒಂದು ವೇಳೆ ಅಸ್ವಸ್ಥರಾಗಿ ಮಲಗಿದಾಗ ಮಾತ್ರ ಬಿಸಿ ನೀರು ಕುಡಿಯಿರಿ ಎಂದು ವೈದ್ಯರು ಸಲಹೆ ಕೊಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಲ್ಲಿ ಹೆಚ್ಚಿದೆ. ಕೆಲವು ರೆಸ್ಟೋರೆಂಟ್‌ ಗಳಿಗೆ ಹೋದರೆ ಗ್ರಾಹಕರಿಗೆ ಗ್ಲಾಸ್ ನಲ್ಲಿ ಬೆಚ್ಚಗಿನ ನೀರನ್ನು ಸರ್ವ್ ಮಾಡುವುದನ್ನು ನೀವು ಗಮನಿಸಬಹುದು. ಆರೋಗ್ಯ ಪ್ರಜ್ಞೆ ಹೊಂದಿರುವ ಅನೇಕ ಜನರು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು ಎನ್ನುತ್ತಾರೆ. ಆದರೆ ತಣ್ಣೀರು ಕುಡಿಯುವುದರಿಂದ ನಿಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ಎಂಬುದು ಹಲವರ ಅಭಿಪ್ರಾಯ. ತಣ್ಣೀರು ಕುಡಿಯುವುದರಿಂದ ಆಹಾರ ಜೀರ್ಣವಾಗುವುದು ಕಷ್ಟವಾಗುತ್ತದೆ. ನೀರು 4 °C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿದ್ದರೆ ದೇಹವು ಸೂಕ್ತವಾದ ಆಂತರಿಕ ತಾಪಮಾನ (37 ° C) ಕಾಪಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.

ತಣ್ಣೀರು ಜಾಸ್ತಿ ಕುಡಿದರೆ ಮೈಗ್ರೇನ್ ಹೆಚ್ಚಾಗುವುದೇ?
1978ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ತಣ್ಣೀರು ಕುಡಿಯುವುದರಿಂದ ಮೂಗಿನ ಲೋಳೆ ದಪ್ಪ ವಾಗಿರುವುದು ಕಂಡುಬಂದಿದೆ. ಇದರಿಂದ ಉಸಿರಾಡುವುದು ಹೆಚ್ಚು ಕಷ್ಟಕರವಾಗಿದೆ. 2001ರಲ್ಲಿ ನಡೆಸಿದ ಮತ್ತೊಂದು ಅಧ್ಯಯನದಲ್ಲಿ, ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ಹೆಚ್ಚಾಗಿರುವುದು ಕಂಡುಬಂದಿದೆ.

ಹೆಚ್ಚು ತಂಪಾದ ತಣ್ಣೀರು ಕುಡಿಯುವುದರಿಂದಾವ ಅಡ್ಡಪರಿಣಾಮಗಳು
ಅಚಲೇಶಿಯಾ ಎಂಬ ಮತ್ತೊಂದು ನೋವು (ಅನ್ನನಾಳದ ಮೂಲಕ ಆಹಾರ ಹಾದುಹೋಗಲು ಕಷ್ಟವಾಗುವಂತಹ ಸ್ಥಿತಿ) ಸಹ ಹೆಚ್ಚು ತಣ್ಣೀರು ಕುಡಿಯುವರಿಗೆ ಸಂಭವಿಸಿದೆಯಂತೆ. ಚೀನೀಯರ ಔಷಧದ ಪ್ರಕಾರ ತಣ್ಣೀರು ಕುಡಿಯುವುದರಿಂದ ದೇಹದೊಳಗೆ ಅಸಮತೋಲನ ಉಂಟಾಗುತ್ತದೆಯಂತೆ. ಆದ್ದರಿಂದ ದೇಶದ ಹಲವಾರು ಕಡೆ ಬೆಚ್ಚಗಿನ ನೀರು ಅಂದರೆ ಬಿಸಿ ನೀರನ್ನೇ ಕುಡಿಯುತ್ತಾರೆ. ಕುತೂಹಲದ ಸಂಗತಿ ಎಂದರೆ ಬೇಸಿಗೆಯ ದಿನದಂದು ತಣ್ಣೀರು ಕುಡಿಯುವುದರಿಂದ ನಿಮ್ಮ ದೇಹವೇನು ತಣ್ಣಗಾಗುವುದಿಲ್ಲ. ಆದರೆ ಇದನ್ನು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾದರೆ ತಣ್ಣೀರು ಸಾಧಕ ಗಳಿಗಿಂತ ಹೆಚ್ಚು ಬಾಧಕವನ್ನೇ ಹೊಂದಿದೆಯೇ? ನ್ಯಾಚುರೋಪತಿ ವೈದ್ಯರು ಹೇಳುವ ಪ್ರಕಾರ ಯಾವ ನೀರು ಉತ್ತಮ? ಅನುಕೂಲ ಮತ್ತು ಅನಾನುಕೂಲಗಳೇನು? ಎಂಬುದನ್ನು ನೋಡೋಣ ಬನ್ನಿ…

ತಣ್ಣೀರಿನಿಂದ ಆಗುವ ಪ್ರಯೋಜನಗಳು–ನೀವು ಕಠಿಣವಾದ ತಾಲೀಮನ್ನು ನಡೆಸುತ್ತಿದ್ದರೆ ಆಗ ತಣ್ಣೀರು ಕುಡಿಯುವುದು ಒಳ್ಳೆಯದು. ಏಕೆಂದರೆ ವ್ಯಾಯಾಮದ ಸಮಯದಲ್ಲಿ ದೇಹವು ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು. ದೇಹವು ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಆಗ ತಣ್ಣೀರು ಕುಡಿಯಲೇ ಬೇಕಾಗುತ್ತದೆ. ಇದು ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡಲು ಸಹ ಸಹಾಯ ಮಾಡುತ್ತದೆ.

ಉಗುರು ಬೆಚ್ಚಗಿನ (ಬಿಸಿ) ನೀರಿನ ಪ್ರಯೋಜನಗಳು–ಬೆಚ್ಚಗಿನ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ದೇಹವು ವಿಷವನ್ನು ವೇಗವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಆದರೆ, ಬೆಚ್ಚಗಿನ ನೀರನ್ನು ಕುಡಿಯುವುದ ರಿಂದ ನಿಮಗೆ ಕಡಿಮೆ ಬಾಯಾರಿಕೆಯಾಗಬಹುದು. ಆದ್ದರಿಂದ ಬಿಸಿ ನೀರನ್ನು ಆಗಾಗ ಕುಡಿಯುತ್ತಲೇ ಇರಿ. ಶೀತ ಅಥವಾ ಜ್ವರ ಬಂದಾಗ ತಣ್ಣೀರು ಕುಡಿಯಬಾರದು. ಇದರಿಂದ ನೀವು ನಿಧಾನವಾಗಿ ಗುಣಮುಖ ರಾಗುತ್ತೀರಿ. ಹಾಗೆಯೇ ಚೆನ್ನಾಗಿ ಜೀರ್ಣಕ್ರಿಯೆ ನಡೆಯಬೇಕೆಂದರೆ ತಣ್ಣೀರನ್ನು ಕುಡಿಯುವುದು ಅಷ್ಟು ಸೂಕ್ತವಲ್ಲ. ಸಂಶೋಧನೆಯ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಕಂಡುಕೊಂಡಿವೆ. ನಮ್ಮ ದೇಹದಲ್ಲಿ ಶೇ.70ರಷ್ಟು ನೀರಿನಾಂಶವಿರುವ ಕಾರಣದಿಂದಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಲಾಭಕಾರಿ ಎಂದು ಹೇಳಲಾಗುತ್ತದೆ.

ತೂಕ ಇಳಿಸುಲ್ಲಿ–ಪ್ರತಿದಿನ ಖಾಲಿಹೊಟ್ಟೆಗೆ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಹೆಚ್ಚಿನ ಫಲವನ್ನು ಪಡೆಯಲು ಸಾಧ್ಯ. ಒಂದು ಲೋಟ ಬೆಚ್ಚನೆಯ ನೀರಿಗೆ ಎರಡು ಚಮಚ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಅನಗತ್ಯವಾಗಿ ಹಸಿವಾಗುವುದನ್ನು ನಿಲ್ಲಿಸುತ್ತದೆ ಹಾಗೂ ದೇಹದ ತೂಕ ಇಳಿಯಲು ನೆರವಾಗುತ್ತದೆ.

ಯಾವುದು ಉತ್ತಮ?–ನೀವು ನಿಯಮಿತವಾಗಿ ತಾಲೀಮು ಮತ್ತು ವ್ಯಾಯಾಮ ಮಾಡುತ್ತಿದ್ದರೆ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತಣ್ಣೀರು ಕುಡಿಯುವುದರಿಂದ ತೂಕ ನಷ್ಟವಾಗುವುದಿಲ್ಲ ಎಂಬುದು ನೆನಪಿರಲಿ.

ಬೇಸಿಗೆಯ ದಿನಗಳಲ್ಲಿತಂಪು ನೀರು ಬೇಡ–ಬೇಸಿಗೆಯ ದಿನಗಳಲ್ಲಿ ತಂಪಾಗಿರುವ ನೀರನ್ನು ಕುಡಿಯುವುದರಿಂದ ಒಳ್ಳೆಯದಕ್ಕಿಂತ ಹಾನಿ ಹೆಚ್ಚು. ಏಕೆಂದರೆ ತಣ್ಣೀರು ಅನ್ನನಾಳದ ಸೆಳೆತ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು. ಇದು ನಿಮ್ಮ ಹೃದಯ ಬಡಿತ ಮತ್ತು ರಕ್ತದ ಉಷ್ಣತೆಯ ಕುಸಿತಕ್ಕೂ ಕಾರಣವಾಗಬಹುದು. ಈ ಎರಡರ ಬಗ್ಗೆಯೂ ಮಾಹಿತಿಯನ್ನು ಪಡೆದ ಮೇಲೆ ಈಗ ನೀವು ಯಾವ ನೀರು ಯಾವಾಗ ಆರೋಗ್ಯಕ್ಕೆ ಯೋಗ್ಯ ಎಂಬುದನ್ನು ನಿರ್ಧರಿಸಬೇಕು.

Leave a Comment