ಅರಳಿ ಮರ ಅಂದ್ರೆ ದೇವರ ಸ್ವರೂಪ ಅಂತಾ ಹೇಳಲಾಗುತ್ತದೆ. ಅರಳಿ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮೀ ನೆಲೆ ನಿಂತಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಪ್ರತಿದಿನ ಅರಳಿಮರಕ್ಕೆ ಪ್ರದಕ್ಷಿಣೆ ಹಾಕಬಾರದು ಅಂತಾ ಹೇಳ್ತಾರೆ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ನಾವು ಈಗಾಗಲೇ ನಿಮಗೆ ದರಿದ್ರ ಲಕ್ಷ್ಮೀ ಮನೆಗೆ ಬರಬಾರದು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಅದಕ್ಕೆ ಸಂಬಂಧಿಸಿದ ಇನ್ನೊಂದು ಮಾಹಿತಿಯನ್ನ ಇಂದು ನೀಡಲಿದ್ದೇವೆ. ಪ್ರತಿದಿನ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದಲೂ ಮನೆಗೆ ದರಿದ್ರ ಲಕ್ಷ್ಮೀಯ ಪ್ರವೇಶವಾಗುತ್ತದೆ. ಈ ಬಗ್ಗೆ ಒಂದು ಕಥೆ ಇದೆ.
ಅದೃಷ್ಟ ಲಕ್ಷ್ಮೀಯ ಅಕ್ಕ ದರಿದ್ರ ಲಕ್ಷ್ಮೀ. ಶ್ರೀಲಕ್ಷ್ಮೀಯನ್ನು ವಿಷ್ಣು ವಿವಾಹವಾಗಲು ಬಯಸಿದಾಗ, ನನ್ನ ಅಕ್ಕ ಅಲಕ್ಷ್ಮೀ ಮೊದಲು ಮದುವೆಯಾಗಬೇಕು. ನಂತರ ನಾನು ಮದುವೆಯಾಗುತ್ತೇನೆ ಅಂತಾ ಹೇಳುತ್ತಾಳೆ. ಆಗ ದರಿದ್ರ ಲಕ್ಷ್ಮೀಗೆ ವರಾನ್ವೇಷಣೆ ಶುರುವಾಗುತ್ತದೆ. ಕುರೂಪಿಯಾಗಿದ್ದ, ಯಾವಾಗಲೂ ಅಶುಭವನ್ನೇ ಮಾಡುವ ದರಿದ್ರ ಲಕ್ಷ್ಮೀಯನ್ನು ಮದುವೆಯಾಗಲು ಯಾರೂ ಒಪ್ಪಲಿಲ್ಲ.
ಕೊನೆಗೆ ಉದ್ಧಾಲಕ ಎಂಬ ಮುನಿಗೆ ದರಿದ್ರ ಲಕ್ಷ್ಮೀಯನ್ನು ವಿವಾಹ ಮಾಡಿಕೊಡಲಾಯಿತು. ಆದ್ರೆ ಆಕೆಯನ್ನು ಮನೆ ತುಂಬಿಸಿಕೊಳ್ಳಲಾಗಲಿಲ್ಲ. ಯಾಕಂದ್ರೆ ಆ ಮನೆ ಶುದ್ದವಾಗಿ, ಯಜ್ಞ ಯಾಗಾದಿಗಳಿಂದ ಕೂಡಿದ್ದು, ಸಕಾರಾತ್ಮಕ ಶಕ್ತಿಯಿಂದ ಕೂಡಿತ್ತು. ಆದ್ದರಿಂದ ದರಿದ್ರ ಲಕ್ಷ್ಮೀ ತಾನು ಇಂಥ ಮನೆಗೆ ಬರುವುದಿಲ್ಲವೆಂದು ಹೇಳಿದಳು. ಆಗ ಉದ್ದಾಲಕ ಮುನಿಗಳು ತಮ್ಮ ಗುರುಗಳ ಬಳಿ ಹೋಗಿ, ದರಿದ್ರ ಲಕ್ಷ್ಮೀಯ ಬಗ್ಗೆ ಹೇಳಿ, ಆಕೆಯನ್ನು ತನ್ನ ಮನೆಗೆ ಬರಮಾಡಿಕೊಳ್ಳಲಾಗುತ್ತಿಲ್ಲ ಎನ್ನುತ್ತಾರೆ.
ಆಗ ಗುರುಗಳು ಆಕೆ ಯಾವ ಮನೆಯಲ್ಲಿ ಅಶುದ್ಧತೆ ಇರುತ್ತದೆಯೋ, ಪೂಜೆ ಪುನಸ್ಕಾರ ನಡೆಯುವುದಿಲ್ಲವೋ, ಯಾರು ಆಡಂಬರದ ಜೀವನ ಮಾಡುತ್ತಾರೋ, ಯಾರು ಹೆಣ್ಣು ಮಕ್ಕಳಿಗೆ ಗೌರವ ನೀಡುವುದಿಲ್ಲವೋ ಅಂಥವರ ಮನೆಯಲ್ಲಿ ದರಿದ್ರ ಲಕ್ಷ್ಮೀ ವಾಸಿಸುತ್ತಾಳೆ.
ಯಾರ ಮನೆಯಲ್ಲಿ ಪೂಜೆ ಪುನಸ್ಕಾರ, ಹೋಮ ಹವನ ನಡೆಯುತ್ತದೆಯೋ, ಯಾವ ಮನೆ ಶುದ್ಧವಾಗಿರುತ್ತದೆಯೋ, ಯಾರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೋ, ಯಾರು ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ, ಕರುಣೆ ತೋರಿಸುತ್ತಾರೋ, ಅಂಥವರ ಮನೆಗೆ ದರಿದ್ರ ಲಕ್ಷ್ಮೀಗೆ ಪ್ರವೇಶವಿಲ್ಲ ಅಂತಾ ಹೇಳುತ್ತಾರೆ.
ಆಗ ಮುನಿಗಳು ದರಿದ್ರ ಲಕ್ಷ್ಮೀಯನ್ನು ಕರೆದುಕೊಂಡು, ಆಕೆ ಉಳಿದುಕೊಳ್ಳಬಹುದಾದ ವಾಸಸ್ಥಳ ಹುಡುಕಿಕೊಂಡು ಹೋಗುತ್ತಾರೆ. ದಾರಿ ಮಧ್ಯೆ ಅರಳಿಮರ ನೋಡಿದ ಮುನಿಗಳು ದರಿದ್ರ ಲಕ್ಷ್ಮೀಯನ್ನು ಅರಳಿಕಟ್ಟೆಯ ಮೇಲೆ ಕೂರಿಸಿ, ತಾನು ವಾಸಸ್ಥಳ ಹುಡುಕಿ ಬರುವುದಾಗಿ ಹೇಳಿ ಹೋಗುತ್ತಾರೆ.
ಇತ್ತ ಒಬ್ಬಳೇ ಕುಳಿತ ದರಿದ್ರ ಲಕ್ಷ್ಮೀ ಕಾದು ಕಾದು ಸುಸ್ತಾಗಿ, ಲಕ್ಷ್ಮೀಯನ್ನ ನೆನೆಯುತ್ತಾಳೆ. ಲಕ್ಷ್ಮೀ-ವಿಷ್ಣು ದರಿದ್ರ ಲಕ್ಷ್ಮೀ ಇರುವ ಸ್ಥಳಕ್ಕೆ ಬಂದು, ಆದ ವಿಷಯವನ್ನು ತಿಳಿದುಕೊಳ್ಳುತ್ತಾರೆ. ಆಗ ಶ್ರಿವಿಷ್ಣು ದರಿದ್ರ ಲಕ್ಷ್ಮೀಯನ್ನು ಕುರಿತು, ನೀನು ಈ ಅರಳಿ ಮರದಲ್ಲಿಯೇ ನೆಲೆನಿಲ್ಲು. ನಾನು ಮತ್ತು ಶ್ರೀಲಕ್ಷ್ಮೀ ಶನಿವಾರದಂದು ಬಂದು ನಿನ್ನ ಜೊತೆ ಈ ಅರಳಿ ಮರದಲ್ಲಿರುತ್ತೇವೆ ಎಂದು ಹೇಳುತ್ತಾನೆ. ಆದ್ದರಿಂದ ಪ್ರತಿದಿನ ಅರಳಿ ಮರ ಸುತ್ತಬಾರದು. ಶನಿವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದರೆ ಶುಭ ಆಗುತ್ತದೆ.ಮತ್ತು ಆಯಾ ದಿನಗಳಲ್ಲಿ ಅರಳಿಮರ ಸುತ್ತಲಾಗುತ್ತದೆ.