chocolate ಚಾಕ್ಲೇಟ್ ಎಂದರೆ ತುಂಬಾ ಜನಕ್ಕೆ ಅಚ್ಚುಮೆಚ್ಚು. ಕೇವಲ ಮಕ್ಕಳು ಮಾತ್ರ ಚಾಕ್ಲೇಟ್ ತಿನ್ನಬೇಕು ಎಂದೇನಿಲ್ಲ, ನಾವೂ ಕೂಡ ತಿನ್ನಬಹುದು ಎಂದು ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಗೆಬಗೆಯ ದುಬಾರಿ ಚಾಕ್ಲೆಟ್ ಗಳನ್ನು ತಿನ್ನಲು ಮುಂದಾಗುತ್ತಾರೆ.
ಚಾಕಲೇಟ್‌ಗಳಲ್ಲಿ ಸಿಗುವ ಹಲವಾರು ಬಗೆಯ ಅದ್ಭುತ ಅಂಶಗಳು ದೇಹದ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಒಳಗಿನ ಸಾಕಷ್ಟು ಅಂಗಗಳಿಗೆ ಆರೋಗ್ಯಕರ ಅಭಿವೃದ್ಧಿಯನ್ನು ತಂದು ಕೊಡುತ್ತವೆ. ಗರ್ಭಿಣಿಯರಿಗೆ ಹುಟ್ಟುವ ಮಕ್ಕಳ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಾರೆ.
ಆದರೆ ಚಾಕ್ಲೇಟ್ ಸೇವನೆ ಆರೋಗ್ಯಕ್ಕೆ ಎಷ್ಟು ಹಿತಕರ ಅಷ್ಟೇ ತೊಂದರೆ ಕೂಡ ಕೊಡುತ್ತದೆ ಎಂದು ಹೇಳಲಾಗಿದೆ. ಈ ಲೇಖನದಲ್ಲಿ ಚಾಕಲೇಟ್ ಸೇವನೆಯಿಂದ ನಮಗೆ ಉಂಟಾಗುವ ಪ್ರಯೋಜನಗಳು ಮತ್ತು ತೊಂದರೆಗಳು ಯಾವುವು ಎಂಬುದನ್ನು ನೋಡೋಣ. ಚಾಕ್ಲೆಟ್ ತಿನ್ನುವುದರ ಹಿಂದಿನ ಆರೋಗ್ಯಕರ ಉಪಯೋಗಗಳು ಹೀಗಿವೆ : –
ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ–” ಜರ್ನಲ್ ಆಫ್ ನ್ಯೂಟ್ರಿಷನ್ ” ನ ಒಂದು ಅಧ್ಯಯನದಲ್ಲಿ ತಿಳಿಸಿರುವ ಹಾಗೆ ಪ್ರತಿ ದಿನ ಚಾಕ್ಲೇಟ್ ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ಮನುಷ್ಯನ ದೇಹದಲ್ಲಿ ಕಂಡು ಬರುವ ಎಲ್ ಡಿ ಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೃದಯಕ್ಕೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಕಂಡು ಹಿಡಿದಿರುವ ಒಂದು ಸತ್ಯಾಂಶ ಎಂದರೆ ಚಾಕಲೇಟ್ ಬಾರ್‌ಗಳಲ್ಲಿ ಪ್ಲಾಂಟ್ ಸ್ಪಿರಾಲ್ ಮತ್ತು ಕೋಕೋ ಫ್ಲ್ಯಾವೊನೋಲ್ ಅಂಶಗಳು ಸಾಕಷ್ಟು ಹೆಚ್ಚಿದ್ದು ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣ ಲಕ್ಷಣ ಪಡೆದಿವೆ. ಹಾಗಾಗಿ ಪ್ರತಿ ದಿನ ಚಾಕ್ಲೇಟ್ ತಿನ್ನುವವರಿಗೆ ರಕ್ತದ ಒತ್ತಡ ಮತ್ತು ಹೃದಯದ ಸಮಸ್ಯೆ ದೂರವಿರುತ್ತದೆ ಎಂದು ಹೇಳಬಹುದು.
ಅರಿವಿನ ಕಾರ್ಯಕ್ಷಮತೆ–” ಹಾರ್ವರ್ಡ್ ಮೆಡಿಕಲ್ ಸ್ಕೂಲ್ ” ನ ವಿಜ್ಞಾನಿಗಳು ಹೇಳುವ ಹಾಗೆ ಕೇವಲ ಮಕ್ಕಳು ಮಾತ್ರವಲ್ಲ, ವಯಸ್ಸಾದವರು ಕೂಡ ಒಂದು ದಿನಕ್ಕೆ ಎರಡು ಕಪ್ ಹಾಟ್ ಚಾಕ್ಲೆಟ್ ಡ್ರಿಂಕ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಮ್ಮ ಮೆದುಳಿನ ಚುರುಕುತನವನ್ನು ಹೆಚ್ಚಿಸಿಕೊಳ್ಳಬಹುದು.
ಜೊತೆಗೆ ವಯಸ್ಸಾಗುತ್ತಿದ್ದಂತೆ ಎದುರಾಗುವ ಅರಿವಿನ ಸಮಸ್ಯೆಯನ್ನು ಅಥವಾ ನೆನಪಿನ ಶಕ್ತಿಯ ಕೊರತೆಯನ್ನು ಸುಲಭವಾಗಿ ನೀಗಿಸಿಕೊಳ್ಳಬಹುದು. ಏಕೆಂದರೆ ಹಾಟ್ ಚಾಕ್ಲೇಟ್ ಡ್ರಿಂಕ್ ಕುಡಿಯುವ ಅಭ್ಯಾಸದಿಂದ ದೇಹದಲ್ಲಿ ರಕ್ತ ಸಂಚಾರ ಅಭಿವೃದ್ಧಿಗೊಂಡು ಮೆದುಳಿಗೂ ಸಹ ರಕ್ತ ಸಂಪರ್ಕ ಸರಾಗವಾಗಿ ಏರ್ಪಾಡಾಗಿ ಅವರಿಗೆ ಸಾಕಷ್ಟು ನೆರವಾಗುತ್ತದೆ.
ಚಾಕಲೇಟ್ ಗಳಲ್ಲಿ ಲಭ್ಯವಿರುವ ಕೋಕೋ ಅಂಶ ವಯಸ್ಸಾದಂತೆ ಉಂಟಾಗುವ ನರಮಂಡಲದ ಹಾನಿಯನ್ನು ತಪ್ಪಿಸಿ ಅಲ್ಜಿಮರ್ ಕಾಯಿಲೆಯಿಂದ ದೂರ ಇಡುತ್ತದೆ ಎಂದು ಹೇಳಲಾಗಿದೆ. ಅದೂ ಅಲ್ಲದೆ ಇನ್ನೊಂದು ಸಂಶೋಧನೆ ಹೇಳುವ ಪ್ರಕಾರ ವಾರಕ್ಕೆ ಒಮ್ಮೆಯಾದರೂ ಚಾಕ್ಲೇಟ್ ತಿನ್ನುವುದರಿಂದ ನೆನಪಿನ ಶಕ್ತಿ ವೃದ್ಧಿಗೊಳ್ಳುತ್ತದೆ.
ಹೃದಯದ ಕಾಯಿಲೆ ದೂರವಾಗುತ್ತದೆ–ದೀರ್ಘ ಕಾಲದಿಂದ ಹೃದಯದ ಸಮಸ್ಯೆ ಹೊಂದಿರುವವರು ಚಾಕ್ಲೆಟ್ ತಿನ್ನುವ ಅಭ್ಯಾಸ ಮಾಡಿಕೊಂಡರೆ ತಮ್ಮ ಹೃದಯದ ಸಮಸ್ಯೆ ಮೂರರಲ್ಲಿ ಒಂದು ಭಾಗ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಹೃದಯದ ಆರೋಗ್ಯಕ್ಕೆ ಸಂಬಂಧ ಪಟ್ಟ ಸಂಶೋಧಕರು ಹೇಳುತ್ತಾರೆ.
ಅಂದರೆ ಅವರು ತಮ್ಮ ಸಂಶೋಧನೆಯಲ್ಲಿ ಕಂಡು ಹಿಡಿದಿರುವ ಹಾಗೆ ನಿತ್ಯ ನಿಯಮಿತವಾಗಿ ಚಾಕ್ಲೇಟ್ ಸೇವನೆ ಮಾಡುವ ಮಂದಿಗೆ ತಮ್ಮ ಹೃದಯ ರಕ್ತ ನಾಳದ ಮೆಟಬಾಲಿಕ್ ಅಸ್ವಸ್ಥತೆಗಳು ದೂರವಾಗುತ್ತವೆ ಎಂದು ಹೇಳುತ್ತಾರೆ. ಆದರೂ ಈ ವಿಚಾರದಲ್ಲಿ ಇನ್ನಷ್ಟು ಸಂಶೋಧನೆಗಳು ಅಗತ್ಯವಿವೆ ಎಂಬುದನ್ನು ಕೂಡ ತಿಳಿಸಿದ್ದಾರೆ.
ಪಾರ್ಶ್ವವಾಯು ಸಮಸ್ಯೆಯಿಂದ ದೂರ–ಕೆನಡಾ ದೇಶದ ವಿಜ್ಞಾನಿಗಳು ಈ ವಿಚಾರವಾಗಿ ಸುಮಾರು 40 ಸಾವಿರ ವ್ಯಕ್ತಿಗಳನ್ನು ಪರೀಕ್ಷೆಗಾಗಿ ಗುರಿಪಡಿಸಿದ್ದರು. ಅವರಲ್ಲಿ ಪ್ರತಿ ದಿನ ಒಂದು ಬಾರಿ ಚಾಕ್ಲೇಟ್ ಹಾಟ್ ಡ್ರಿಂಕ್ ಕುಡಿಯುತ್ತಿದ್ದವರಿಗೆ ಇತರರಿಗೆ ಹೋಲಿಸಿದರೆ ಶೇಕಡ 20 % ರಷ್ಟು ಪಾರ್ಶ್ವವಾಯು ಸಮಸ್ಯೆಗೆ ಗುರಿಯಾಗುವ ಸಂಭವ ತಪ್ಪಿ ಹೋಗಿತ್ತು. ಅದೂ ಅಲ್ಲದೆ ವಾರದಲ್ಲಿ ಎರಡು ಬಾರಿ ಚಾಕಲೇಟ್ ಡ್ರಿಂಕ್ ಸೇವನೆ ಮಾಡುತ್ತಿದ್ದ 46 % ಮಂದಿಗೆ ಪಾರ್ಶ್ವವಾಯು ನಿಂದ ಮರಣ ಹೊಂದುವ ಸಂಭವ ತಪ್ಪಿತು.
ಗರ್ಭಿಣಿಯರಿಗೆ ಭ್ರೂಣದ ಬೆಳವಣಿಗೆಯಲ್ಲಿ ಸಹಕಾರಿ—ಗರ್ಭಿಣಿಯರಿಗೆ ಇದೊಂದು ಸಾಮಾನ್ಯ ಪ್ರಶ್ನೆ ಇದ್ದೇ ಇರುತ್ತದೆ. ಯಾವ ಆಹಾರ ತಿನ್ನಬೇಕು ಯಾವುದನ್ನು ತಿನ್ನಬಾರದು ಎಂದು ಮೊದಲೇ ವೈದ್ಯರಿಂದ ಮಾಹಿತಿ ಕಲೆ ಹಾಕಿರುತ್ತಾರೆ.
ಆದರೂ ಕೆಲವು ಸಂಶೋಧಕರು ತಮ್ಮ ಅಭಿಪ್ರಾಯದಲ್ಲಿ ಹೇಳಿರುವ ಹಾಗೆ ಗರ್ಭಿಣಿ ಮಹಿಳೆಯರು ಪ್ರತಿ ದಿನ 30 ಗ್ರಾಂ ಚಾಕಲೇಟ್ ಸೇವನೆ ಮಾಡುತ್ತಾ ಬಂದರೆ ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಹಾಗೂ ಅಭಿವೃದ್ಧಿ ಸಮಗ್ರ ರೀತಿಯಲ್ಲಿ ಆಗುತ್ತದೆ ಎಂದು ಹೇಳುತ್ತಾರೆ.
ಅಥ್ಲೆಟ್ ಗಳಿಗೆ ಸಾಕಷ್ಟು ಅನುಕೂಲ–ಸಾಧಾರಣವಾಗಿ ಸ್ಪೋರ್ಟ್ಸ್ ಗಳಲ್ಲಿ ಭಾಗವಹಿಸುವವರಿಗೆ ತಮ್ಮ ದೇಹದ ಸದೃಡತೆ ಬಹಳ ಮುಖ್ಯವಾಗುತ್ತದೆ. ದೇಹದಲ್ಲಿ ಸಮರ್ಪಕವಾಗಿ ಆಮ್ಲಜನಕದ ಸಂಚಾರ ನಿರಂತರವಾಗಿ ನಡೆಯಬೇಕಾದರೆ ಪ್ರೋಟೀನ್ ಡ್ರಿಂಕ್ ಮತ್ತು ಚಾಕ್ಲೇಟ್ ಡ್ರಿಂಕ್ ಅತ್ಯವಶ್ಯಕ. ಇದರಿಂದ ಹೆಚ್ಚು ದೂರ ಕ್ರಮಿಸಲು ನೆರವಾಗುತ್ತದೆ.
ವಿಜ್ಞಾನಿಗಳು ಹೇಳುವ ಹಾಗೆ ಡಾರ್ಕ್ ಚಾಕಲೇಟ್ ಗಳಲ್ಲಿ ಫ್ಲ್ಯಾವೊನೋಲ್ ಅಂಶಗಳು ಹೆಚ್ಚಾಗಿರುವ ಕಾರಣ ದೇಹದಲ್ಲಿ ನೈಟ್ರಿಕ್ ಆಸಿಡ್ ಅಂಶ ಹೆಚ್ಚಾಗಿ ಬಿಡುಗಡೆಗೊಂಡು ಅಥ್ಲೇಟ್ ಹಾಗೂ ಸ್ಫೋರ್ಟ್ಸ್ಮನ್ ಗಳಿಗೆ ತಮ್ಮ ಚಟುವಟಿಕೆಗಳಲ್ಲಿ ಹೆಚ್ಚಿನ ದಕ್ಷತೆಯಿಂದ ಪಾಲ್ಗೊಳ್ಳಲು ಸಹಾಯವಾಗುತ್ತದೆ.ಇವಿಷ್ಟು ಆಗಾಗ ಚಾಕ್ಲೆಟ್ ತಿನ್ನುವುದರಿಂದ ಉಂಟಾಗುವ ಪ್ರಯೋಜನಗಳು. ಆದರೆ ಚಾಕ್ಲೇಟ್ ಸೇವನೆಯಿಂದ ಕೆಲವು ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಎದುರಾಗುತ್ತವೆ.
ಮೊದಲಿಗೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ–ಚಾಕ್ಲೇಟ್ ಅಂಶ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಅಂಶ ನಿಧಾನವಾಗಿ ಹೆಚ್ಚಾಗುತ್ತದೆ. ಏಕೆಂದರೆ ಚಾಕ್ಲೇಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಅಂಶಗಳು ಲಭ್ಯವಿದ್ದು, ಅದರಲ್ಲಿನ ಸಕ್ಕರೆ ಪ್ರಮಾಣ ಮತ್ತು ಕೊಬ್ಬಿನ ಅಂಶ ದೇಹ ಸೇರಿ ತುಂಬಾ ಸಣ್ಣ ಇರುವವರು ಕೂಡ ಕೆಲವೇ ದಿನಗಳಲ್ಲಿ ತಮ್ಮ ದೇಹದ ಸದೃಢತೆಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ಇತರರಿಗಿಂತ ನೋಡಲು ಹೆಚ್ಚು ದಪ್ಪ ಹಾಗೂ ಹೆಚ್ಚು ತೂಕವನ್ನು ಹೊಂದಿರುವವರಾಗಿರುತ್ತಾರೆ.
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ–ಮುಖ್ಯವಾಗಿ ಮಧುಮೇಹ ಇರುವವರು ಈ ವಿಚಾರವಾಗಿ ಸಾಕಷ್ಟು ಗಮನಹರಿಸಬೇಕು. ಚಾಕ್ಲೇಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಇರುವುದರಿಂದ ಅದು ಅವರ ಪ್ರತಿ ದಿನದ ಮಧುಮೇಹದ ಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಜೊತೆಗೆ ಮಕ್ಕಳು ಹೆಚ್ಚಾಗಿ ಚಾಕ್ಲೆಟ್ ತಿನ್ನುವುದರಿಂದ ಹುಳುಕು ಹಲ್ಲು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮೈಗ್ರೇನ್ ಸಮಸ್ಯೆ ಇದ್ದದ್ದೇ–ಇದು ಪ್ರತಿಯೊಬ್ಬರಿಗೂ ಉಂಟಾಗುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಕೆಲವು ಮಂದಿಗೆ ಮಾತ್ರ ಪ್ರತಿ ದಿನ ಚಾಕ್ಲೇಟ್ ತಿನ್ನುವ ಅಭ್ಯಾಸದಿಂದ ತಮ್ಮ ದೇಹದಲ್ಲಿನ ಕೆಲವೊಂದು ರಾಸಾಯನಿಕ ಪ್ರಕ್ರಿಯೆಗಳಲ್ಲಿ ಬದಲಾವಣೆ ಉಂಟಾಗಿ ವಿಪರೀತ ತಲೆ ನೋವು ಬರಲು ಶುರುವಾಗುತ್ತದೆ. ಇದು ದಿನಕಳೆದಂತೆ ಮೈಗ್ರೇನ್ ಆಗಿ ಬದಲಾಗುತ್ತದೆ.
ಮೂಳೆಗಳ ಆರೋಗ್ಯ ಹದಗೆಡುತ್ತದೆ–ಕೆಲವು ಉದಾಹರಣೆಗಳು ತಿಳಿಸಿರುವ ಹಾಗೆ ಚಾಕ್ಲೆಟ್ ಇನ್ನು ಅಭ್ಯಾಸ ಮಾಡಿಕೊಂಡರೆ ದೇಹದ ಮೂಳೆಗಳಲ್ಲಿ ಸಣ್ಣ ಸಣ್ಣ ರಂದ್ರಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ವಯಸ್ಸಾದ ಮಹಿಳೆಯರು ಪ್ರತಿ ದಿನ ಚಾಕ್ಲೇಟ್ ತಿಂದರೆ ಅವರ ದೇಹದ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಸಾಮರ್ಥ್ಯ ಕೂಡ ತಗ್ಗುತ್ತದೆ.
ಭಾರವಾದ ಲೋಹಗಳು ಮೈ ಸೇರುತ್ತವೆ-ಕೋಕೋ ಪೌಡರ್, ಚಾಕಲೇಟ್ ಬಾರ್, ಕೋಕೋ ನಿಬ್ಸ್ ಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಡ್ಮಿಯಂ ಮತ್ತು ಸೀಸದ ಅಂಶ ಇರುವ ಕಾರಣ ಇದು ದಿನ ಕಳೆದಂತೆ ಇವುಗಳು ಮನುಷ್ಯನ ಕಿಡ್ನಿಗಳು ಮೂಳೆಗಳು ಹಾಗೂ ಇನ್ನಿತರ ದೇಹದ ಅಂಗಾಂಶಗಳಿಗೆ ತೊಂದರೆ ಉಂಟು ಮಾಡುತ್ತವೆ.
2017ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಸುಮಾರು 43 ಕಂಪನಿಗಳ ಚಾಕ್ಲೇಟ್ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಚಾಕಲೇಟ್ ಅಂಶ ಇರುವುದು ಪತ್ತೆಯಾಗಿದೆ. ಹಾಗಾಗಿ ಹೆಚ್ಚಾಗಿ ಚಾಕ್ಲೇಟ್ ಸೇವನೆ ಮಾಡುವ ವಿಚಾರದಲ್ಲಿ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು.