ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.
ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಈ ಘಟನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಹೀಗೆ ಒಟ್ಟು 12 ಸಂಕ್ರಾಂತಿಗಳಿದ್ದು ಅವುಗಳಲ್ಲಿ ಮಕರ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ.
ಮಕರ ಸಂಕ್ರಾಂತಿ ಹಬ್ಬವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಹೊಸ ಬೆಳೆ ಮತ್ತು ಹೊಸ ಋತುವಿನ ಆಗಮನವನ್ನು ಸೂಚಿಸುತ್ತದೆ. ಮಕರ ಸಂಕ್ರಾಂತಿಯನ್ನು ಭಾರತದ ಅನೇಕ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿಯಂದು ರವಿಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ಸೂರ್ಯ ದೇವನ ಪೂಜೆ ಮಾಡುವ ವ್ಯಕ್ತಿಯು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಮಕರ ಸಂಕ್ರಾಂತಿ ಶುಭ ಮುಹೂರ್ತ:
2024ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಸೋಮವಾರ ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು ಮಧ್ಯರಾತ್ರಿ 02:54 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಮಕರ ಸಂಕ್ರಾಂತಿಯ ಶುಭ ಸಮಯ ಹೀಗಿರುತ್ತದೆ
- *ಮಕರ ಸಂಕ್ರಾಂತಿ ಪುಣ್ಯ ಕಾಲ – 07:15 ರಿಂದ 06:21 ರವರೆಗೆ
- *ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ – 07:15 ರಿಂದ 09:06 (ಮಹಾ ಪುಣ್ಯಕಾಲದಲ್ಲಿ ಗಂಗಾ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ)
- *ರವಿಯೋಗ – 07:15 AM ರಿಂದ 08:07 AM
ಮಕರ ಸಂಕ್ರಾಂತಿಯಂದು ಸೂರ್ಯ ಪೂಜೆಯ ಮಹತ್ವ:
ಮಕರ ಸಂಕ್ರಾಂತಿಯನ್ನು ಮಹಾಪರ್ವ ಎಂದೂ ಕರೆಯುತ್ತಾರೆ. ಈ ವಿಶೇಷ ದಿನದಂದು ಸೂರ್ಯದೇವನು ಉತ್ತರಾಯಣನಾಗುತ್ತಾನೆ. ಈ ದಿನ ಸೂರ್ಯನ ಪೂಜೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮಕರ ಸಂಕ್ರಾಂತಿಯಂದು ಸಂಪೂರ್ಣ ವಿಧಿವಿಧಾನಗಳೊಂದಿಗೆ ಸೂರ್ಯನನ್ನು ಆರಾಧಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಆಯಸ್ಸು ಕೂಡ ಹೆಚ್ಚಾಗುತ್ತದೆ ಮತ್ತು ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ. ರವಿ ಯೋಗದಲ್ಲಿ ಸೂರ್ಯ ದೇವರನ್ನು ಪೂಜಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂದು ನಂಬಲಾಗಿದೆ.
ಈ ರೀತಿ ಸೂರ್ಯನಿಗೆ ನೀರನ್ನು ಅರ್ಪಿಸಿ
ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಬರಮಾಡಿಕೊಳ್ಳಲು ಮಕರ ಸಂಕ್ರಾಂತಿಯ ದಿನ ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮತ್ತು ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಸೇರಿಸಿ. ಗಂಗಾಜಲ ಸಿಗದಿದ್ದರೆ ತುಳಸಿ ಎಲೆಗಳನ್ನೂ ಹಾಕಬಹುದು. ಸ್ನಾನದ ನಂತರ, ಶುದ್ಧ ಅಥವಾ ಹೊಸ ಬಟ್ಟೆಗಳನ್ನು ಧರಿಸಿ, ಸೂರ್ಯ ದೇವರನ್ನು ಧ್ಯಾನಿಸಿ. ಸೂರ್ಯ ನಮೋಸ್ತು ಶ್ಲೋಕವನ್ನು 21 ಬಾರಿ ಜಪಿಸಿ.
ಇದರ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಲು ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ. ಮನೆಯ ಬಾಲ್ಕನಿ ಅಥವಾ ಟೆರಸ್‌ಗೆ ಬರಿಗಾಲಿನಲ್ಲಿ ಹೋಗಿ. ಸೂರ್ಯ ದೇವರ 12 ಹೆಸರುಗಳನ್ನು ಪಠಿಸಿ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರ, ಅದೇ ಸ್ಥಳದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಇದು ಸೂರ್ಯನ ಪ್ರದಕ್ಷಿಣೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ.
ಸಂಕ್ರಾಂತಿಯಂದು ಸೂರ್ಯ ಚಾಲೀಸ ಪಠಣ ಮತ್ತು ದಾನ
ಮಕರ ಸಂಕ್ರಾಂತಿಯ ದಿನದಂದು ಸೂರ್ಯ ಚಾಲೀಸಾವನ್ನು ಪಠಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಆದಿತ್ಯ ಸ್ತೋತ್ರವನ್ನು ಪಠಿಸಬಹುದು. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಸೂರ್ಯ ದೇವರನ್ನು ಪ್ರಾರ್ಥಿಸಬಹುದು. ಮಕರ ಸಂಕ್ರಾಂತಿಯ ದಿನದಂದು ಸೂರ್ಯ ದೇವರ ಮುಂದೆ ಆಹಾರ, ನೀರು, ಬಟ್ಟೆ ಇತ್ಯಾದಿಗಳನ್ನು ಇರಿಸಿ, ಪೂಜೆ ಬಳಿಕ ನಂತರ ಈ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿದರೆ ಸೂರ್ಯ ದೇವರು ಸಂತೋಷಪಡುತ್ತಾನೆ ಎಂದು ಹೇಳಲಾಗುತ್ತದೆ.