ಪಿತ್ತ ಕೋಶವು ದೇಹದಲ್ಲಿ ಇರುವ ಒಂದು ಸಣ್ಣ ಅಂಗ. ಆದರೆ ಇದು ಜೀರ್ಣ ಕ್ರಿಯೆಗೆ ಅನುಕೂಲವಾಗುವ ಪಿತ್ತರಸವನ್ನು ಬಿಡುಗಡೆ ಮಾಡುವುದು. ಈ ಅಂಗದಲ್ಲಿ ಕಾಣಿಸಿಕೊಳ್ಳುವ ಕಲ್ಲಿನ ಸಮಸ್ಯೆಯು ಅನಾರೋಗ್ಯಕ್ಕೆ ಕಾರಣವಾಗುವುದು. ಜೊತೆಗೆ ಪಿತ್ತಕೋಶಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆ ಎನಿಸಿಕೊಳ್ಳುವುದು. ಇದು ಆರೋಗ್ಯದಲ್ಲಿ ಕೆಲವು ಅನಾರೋಗ್ಯವನ್ನು ಉಂಟುಮಾಡುವುದು. ಜೊತೆಗೆ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಯನ್ನಾಗಿಯೂ ಪರಿವರ್ತಿಸುವ ಸಾಧ್ಯತೆಗಳಿವೆ.
ಪಿತ್ತ ಕಲ್ಲು ಎಂದರೇನು?
ಪಿಯರ್ ಆಕಾರದಲ್ಲಿ ಜಠರದ ಕೆಳಭಾಗದಲ್ಲಿ ಇರುವ ಅಂಗಕ್ಕೆ ಪಿತ್ತಕೋಶ ಎನ್ನುವರು. ಇದು ಸಣ್ಣಕರುಳಿನಿಂದ ಬಿಡುಗಡೆಯಾಗುವ ಪಿತ್ತ ರಸವನ್ನು ಸಂಗ್ರಹಿಸುವುದು. ಪಿತ್ತಕೋಶದಲ್ಲಿ ಗಟ್ಟಿಯಾದ ಸ್ಫಟಿಕದ ಅಸಹಜ ದ್ರವ್ಯ ರಾಶಿಯಂತೆ ಕಾಣುವ ಅಜೀರ್ಣಕಾರಿ ದ್ರವದ ಗಟ್ಟಿಯಾದ ಮಾರ್ಪಾಡುಗಳಿಗೆ ಪಿತ್ತಕಲ್ಲು ಎಂದು ಕರೆಯುವರು. ಇದು ಗಾತ್ರದಲ್ಲಿ ಬದಲಾವಣೆಯನ್ನು ಹೊಂದುವುದು. ಇದು ಕ್ಯಾಲ್ಸಿಯಮ್ ಲವಣ ಮತ್ತು ಕೊಲೆಸ್ಟ್ರಾಲ್ಗಳಿಂದಲೂ ರೂಪುಗೊಳ್ಳುತ್ತದೆ. ಇದು ತೀವ್ರವಾದ ನೋವು ಮತ್ತು ಪಿತ್ತರಸದ ನಾಳವನ್ನು ತಡೆಯುವುದು. ಕೆಲವೊಮ್ಮೆ ಕಾಮಲೆಯಂತಹ ರೋಗಕ್ಕೂ ಇದು ಕಾರಣವಾಗುವ ಸಾಧ್ಯತೆಗಳಿರುತ್ತವೆ. ಈ ಪಿತ್ತ ಕಲ್ಲುಗಳಿಂದ ಆರೋಗ್ಯದಲ್ಲಿ ತೊಂದರೆ ಇದೆ ಎಂದಾಗ ಅಥವಾ ಅತಿಯಾಗಿ ನೋವನ್ನು ಉಂಟುಮಾಡುತ್ತಿದೆ ಎಂದಾಗ ಮಾತ್ರ ಚಿಕಿತ್ಸೆ ನೀಡಲಾಗುವುದು.
ಪಿತ್ತ ಕಲ್ಲುಗಳಿಂದ ಉಂಟಾಗುವ ಸಮಸ್ಯೆಗಳು
ಕೆಲವು ಅಧ್ಯಯನ ಹಾಗೂ ಸಮಶೋಧನೆಯ ಪ್ರಕಾರ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುವರು. ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹಾಗೂ ಕಡಿಮೆ ವಯಸ್ಸಿನ ಮಹಿಳೆಯರಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಅಧಿಕ ತೂಕ ಹೊಂದಿರುವ ಮಹಿಳೆಯರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಲಹೆ ನೀಡಲಾಗುವುದು. ಗರ್ಭಾವಸ್ಥೆಯಲ್ಲಿ ಇರುವಾಗ ಅಧಿಕ ಕೊಬ್ಬು ಮತ್ತು ಬೊಜ್ಜನ್ನು ಉಂಟುಮಾಡುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಲು ಸಲಹೆ ನೀಡಲಾಗುವುದು. ಅಧಿಕ ಕೊಲೆಸ್ಟ್ರಾಲ್ ಮತ್ತು ಕಡಿಮೆ ನಾರಿನಂಶ ಇರುವ ಆಹಾರ ಸೇವಿಸುವವರಲ್ಲಿ ಈ ಸಮ್ಯೆ ಹೆಚ್ಚಾಗಿ ಕಾಡುವುದು. ಕೆಲವರಿಗೆ ಆನುವಂಶಿಕತೆಯಿಂದಲೂ ಸಮಸ್ಯೆ ಕಾಣಿಸಿಕೊಳ್ಳುವುದು ಎನ್ನಲಾಗುತ್ತದೆ. ಭುಜದಿಂದ ಪಿತ್ತಕೋಶ ಇರುವ ಜಾಗದ ನಡುವೆ ಏನಾದರೂ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರೆ ವೈದ್ಯರಲ್ಲಿ ತಪಾಸಣೆ ಮಾಡಿಸಲು ಸೂಚಿಸಲಾಗುವುದು.
ಪಿತ್ತ ಕಲ್ಲಿನ ಸಮಸ್ಯೆಯನ್ನು ಗುರುತಿಸುವ ಪರಿ
ಅಲ್ಟ್ರಾ ಸೌಂಡ್ ತಪಾಸಣೆ- ಪಿತ್ತಕೋಶದಲ್ಲಿ ಕಲ್ಲಿನ ಕುರುಹುವನ್ನು ಪರೀಕ್ಷಿಸಲು ಕಿಬ್ಬೊಟ್ಟೆಯ ಭಾಗದಲ್ಲಿ ಅಲ್ಟ್ರಾ ಸೌಂಡ್ ಅಥವಾ ಗಣಕೀಕೃತ ಟೊಮೊಗ್ರಫಿ ಸ್ಕ್ಯಾನ್ ಅನ್ನು ಮಾಡಲು ಶಿಫಾರಸ್ಸು ಮಾಡುವರು. ಹೆಚ್ಚುವರಿ ರಕ್ತ ಪರೀಕ್ಷೆ, ಸೋಂಕು, ಕಾಮಲೆ, ಮೇದೋಜ್ಜೀರಕ ಗ್ರಂಥಿಯ ಉರಿಯೂತ ಅಥವಾ ಪಿತ್ತಕಲ್ಲುಗಳಿಂದ ಉಂಟಾಗುವ ಯಾವುದೇ ತೊಂದರೆಗಳಿವೆಯೇ ಎಂದು ಪರೀಕ್ಷಿಸುವರು.
ಪಿತ್ತ ಕೋಶದ ಶಸ್ತ್ರಚಿಕಿತ್ಸೆ
ಪಿತ್ತಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಅಥವಾ ಪಿತ್ತ ಕಲ್ಲಿನ ಗಂಭೀರ ಹಂತದ ಸಮಸ್ಯೆಯನ್ನು ಪಡೆದುಕೊಂಡಿದ್ದರೆ ವೈದ್ಯರು ಪಿತ್ತ ಕೋಶವನ್ನು ತೆಗೆಯುವ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಬಹುದು. ಪಿತ್ತಕೋಶವನ್ನು ತೆಗೆದರೆ ಪಿತ್ತರಸವು ನೇರವಾಗಿ ಸಣ್ಣ ಕರುಳಿಗೆ ರವಾನೆ ಆಗುವುದು. ಆಗ ಜೀರ್ಣ ಕ್ರಿಯೆಗೆ ಯಾವುದೇ ಸಮಸ್ಯೆ ಉಂಟಾಗದು. ಕೆಲವೊಮ್ಮೆ ಇದರಿಂದಾಗಿ ಅತಿಸಾರದ ಸಮಸ್ಯೆ ಉಂಟಾಗಬಹುದು. ಇದನ್ನು ತೆಗೆಯುವುದರಿಂದಾಗಿ ಯಾವುದೇ ಅಂಗವೈಕಲ್ಯ ಉಂಟಾಗುವುದಿಲ್ಲ. ಅತಿಸಾರ ಕಾಣಿಸಿಕೊಂಡರೂ ಅದು ತಾತ್ಕಾಲಿಕವಾಗಿರುತ್ತದೆ ಅಷ್ಟೆ.
ಪಿತ್ತಕೋಶವನ್ನು ತೆಗೆಯಲು ಕಾರಣವೇನು?
ಪಿತ್ತಕೋಶದಲ್ಲಿ ಕಲ್ಲು ಕಾಣಿಸಿಕೊಂಡಾಗ ಅದರ ಗಾತ್ರ ಹಾಗೂ ಹಂತವನ್ನು ಪರೀಕ್ಷಿಸಿ ಔಷಧವನ್ನು ನೀಡಲಾಗುವುದು. ಕೆಲವೊಮ್ಮೆ ಔಷಧವು ಕಲ್ಲನ್ನು ಕರಗಿಸಲು ವಿಫಲವಾಗಬಹುದು. ಔಷಧಿಯಿಂದ ಕಲ್ಲು ಕರಗುವುದು ದೀರ್ಘ ಸಮಯವನ್ನು ತೆಗೆದುಕೊಳ್ಳುವುದು. ಅದು ಕೆಲವೊಮ್ಮೆ ಹಾನಿಕಾರಕ ಪರಿಣಾಮ ಬೀರಬಹುದು. ಹಾಗಾಗಿ ಸಮಸ್ಯೆಯನ್ನು ಪರಿಗಣಿಸಿ ಪಿತ್ತಕೋಶದ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡುವರು.
ಪಿತ್ತ ಕಲ್ಲನ್ನು ಹೇಗೆ ತಡೆಯುವುದು?
ಪಿತ್ತ ಕೋಶದಲ್ಲಿ ಕಾಣಿಸಕೊಳ್ಳುವ ಕಲ್ಲಿನ ಸಮಸ್ಯೆಯನ್ನು ಕೆಲವು ಮುಂಜಾಗ್ರತ ಕ್ರಮ ಹಾಗೂ ಎಚ್ಚರಿಕೆಯನ್ನು ವಹಿಸುವುದರ ಮೂಲಕ ನಿವಾರಿಸಬಹುದು. ತಜ್ಞರು ಅಭಿಪ್ರಾಯಿಸುವ ಪ್ರಕಾರ ಊಟವನ್ನು ತಪ್ಪಿಸುವುದು ಅಥವಾ ದೀರ್ಘ ಸಮಯಗಳ ಕಾಲ ಊಟವನ್ನು ಮಾಡದೆ ಇರುವುದು ಪಿತ್ತ ಕೋಶದಲ್ಲಿ ಕಲ್ಲನ್ನುಂಟುಮಾಡುವುದು. ಶೀಘ್ರದಲ್ಲಿಯೇ ದೇಹದ ತೂಕವನ್ನು ಇಳಿಸುವುದರಿಂದ ಪಿತ್ತ ಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುವುದು. ಹಾಗಾಗಿ ದೇಹದ ತೂಕವನ್ನು ನಿಧಾನ ಗತಿಯಲ್ಲಿ ಇಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ನಂತರ ತೂಕ ಇಳಿಕೆಯ ಮೊದಲ ತಿಂಗಳಲ್ಲಿ ಉರ್ಸೋಡೈಕ್ಸಿಕೋಲಿಕ್ ಆಮ್ಲದಂತಹ ಔಷಧಗಳು ಪಿತ್ತಕಲ್ಲುಗಳ ರಚನೆಯನ್ನು ತಡೆಯುವುದು. ಉತ್ತಮ ಆರೋಗ್ಯ ಹಾಗೂ ಅನೇಕ ಸಮಸ್ಯೆಗಳ ನಿವಾರಣೆಗೆ ನಿಯಮಿತವಾದ ವ್ಯಾಯಾಮಕ್ಕೆ ಅಂಟಿಕೊಳ್ಳುವುದು ಉತ್ತಮವಾದ ಮಾರ್ಗ.