ದಿನದ ಆರಂಭ ಉತ್ತಮವಾಗಿ ಇಲ್ಲದೆ ಇದ್ದರೆ ಆಗ ಖಂಡಿತವಾಗಿಯೂ ಆ ದಿನವು ಉತ್ತಮವಾಗಿರಲು ಸಾಧ್ಯವಿಲ್ಲ. ಹೀಗಾಗಿ ದಿನದ ಆರಂಭವು ಅತೀ ಅಗತ್ಯ. ಇದಕ್ಕಾಗಿ ನೀವು ಬೆಳಗ್ಗೆ ಪಾಲಿಸಬೇಕಾದ ಏಳು ಕ್ರಮಗಳ ಬಗ್ಗೆ ತಿಳಿಸಲಿದ್ದೇವೆ.
ಪ್ರತಿದಿನ ನಿದ್ರೆಯಿಂದ ಎದ್ದ ಬಳಿಕ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಕೆಲವರು ಯೋಗ, ವ್ಯಾಯಾಮ ಇತ್ಯಾದಿಗಳನ್ನು ಮಾಡುವರು. ಇನ್ನು ಕೆಲವರು ದೇವರ ಪೂಜೆ, ಜಪ ಇತ್ಯಾದಿಗಳನ್ನು ಮಾಡುವರು. ಹೀಗೆ ಮಾಡಿದರೆ ದಿನದ ಆರಂಭವು ಉತ್ತಮವಾಗಿ ಇರುವುದು ಎನ್ನುವ ನಂಬಿಕೆ ಇದೆ. ಆದರೆ ಆಧುನಿಕ ಯುಗದಲ್ಲಿ ಹೆಚ್ಚಿನವರಿಗೆ ಇಂತಹ ಕೆಲಸಗಳನ್ನು ಮಾಡಲು ಪುರುಸೊತ್ತೇ ಸಿಗಲ್ಲ. ಹೀಗಾಗಿ ದಿನದ ಆರಂಭವನ್ನು ಧನಾತ್ಮಕವಾಗಿ ಆರಂಭಿಸಿದರೆ ಆಗ ಖಂಡಿತವಾಗಿಯೂ ಆ ದಿನವು ನಮಗೆ ಉತ್ತಮವಾಗಿರುವುದು. ದಿನದ ಆರಂಭವೆನ್ನುವುದು ಆ ದಿನದಲ್ಲಿ ನಮ್ಮ ಮೇಲೆ ತೀವ್ರ ಪರಿಣಾಮ ಬೀರುವುದು.
ಹೀಗಾಗಿ ನೀವು ನಿತ್ಯವು ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು. ಇದು ನಿಮ್ಮ ಕೆಲಸದಲ್ಲಿ ಏಕಾಗ್ರತೆ, ಶಕ್ತಿ ಮತ್ತು ಸಂಯೋಜನೆ ಯನ್ನು ತುಂಬುವುದು. ಇದರಿಂದ ಕೆಲಸವು ಸರಿಯಾದ ಸಮಯಕ್ಕೆ ಮಾಡಲು ನಿಮಗೆ ಸಾಧ್ಯವಾಗಲಿದೆ. ಈ ಲೇಖನದಲ್ಲಿ ನಾವು ನಿಮಗೆ ಬೆಳಗ್ಗೆ ಎದ್ದ ಮಾಡಬೇಕಾದ ಏಳು ಕ್ರಮಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ಪಾಲಿಸಿದರೆ ಆಗ ನೀವು ನಿತ್ಯವೂ ತುಂಬಾ ಧನಾತ್ಮಕ ಚಿಂತನೆ ಹಾಗೂ ದೇಹದಲ್ಲಿ ಉಲ್ಲಾಸದಿಂದ ಕೆಲಸ ಮಾಡಲು ಸಾಧ್ಯವಾಗುವುದು. ಆ ಕ್ರಮಗಳು ಯಾವುದು ಎಂದು ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ…
ಹಾಸಿಗೆ ಸರಿಪಡಿಸಿ
ಹೆಚ್ಚಿನವರು ಈ ವಿಚಾರವನ್ನು ಕಡೆಗಣಿಸುವರು. ಎದ್ದ ಹಾಸಿಗೆಯಲ್ಲಿ ಹಾಗೆ ಬೆಡ್ ಶೀಟ್ ಹಾಗೂ ಹೊದಿಕೆಯನ್ನು ಬಿಟ್ಟು ಏಳುವರು. ಆದರೆ ದಿನದಲ್ಲಿ ಹಾಸಿಗೆಯನ್ನು ಸರಿಯಾ ರೀತಿಯಲ್ಲಿ ಆಯೋಜಿಸಬೇಕು. ಇದು ನಿಮಗೆ ತುಂಬಾ ಸಣ್ಣ ವಿಚಾರವೆಂದು ಕಾಣಿಸಬಹುದು. ಆದರೆ ಮಾನಸಿಕವಾಗಿ ಇದು ತುಂಬಾ ಪರಿಣಾಮ ಬೀರುವುದು. ನೀವು ಹಾಸಿಗೆಯನ್ನು ಸರಿಯಾಗಿ ಇಟ್ಟುಕೊಂಡರೆ ಆಗ ನಿಮಗೆ ಮಾನಸಿಕ ತೃಪ್ತಿಯು ಸಿಗುವುದು ಮತ್ತು ದಿನವಿಡಿ ಇದು ನಿಮಗೆ ನೆರವಾಗಲಿದೆ. ಮನೆಯನ್ನು ಕೂಡ ಸ್ವಚ್ಛವಾಗಿಡಿ.
ಖಾಲಿ ಹೊಟ್ಟೆಗೆ ಚೆನ್ನಾಗಿ ನೀರು ಕುಡಿಯಿರಿ
ನೀರು ಕುಡಿಯುವುದು ಕೂಡ ನಿಮ್ಮ ನಿತ್ಯದ ಕೆಲವು ಕ್ರಮದಲ್ಲಿ ಒಂದಾಗಿದೆ. ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೀರು ಅತೀ ಅಗತ್ಯವಾಗಿರುವುದು ಮತ್ತು ದಿನಾಲೂ ಎದ್ದ ಕೂಡಲೇ ಒಂದು ದೊಡ್ಡ ಲೋಟ ನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವು ಹೊರಗೆ ಹೋಗುವುದು. ನೀವು ತಣ್ಣೀರು, ಬಿಸಿ ನೀರು ಅಥವಾ ಲಿಂಬೆ ನೀರು ಕುಡಿಯುತ್ತೀರಾ ಎನ್ನುವುದು ನಿಮಗೆ ಬಿಟ್ಟಿರುವ ವಿಚಾರ. ಆದರೆ ಬೆಳಗ್ಗೆ ಎದ್ದ ಬಳಿಕ ನೀರು ಕುಡಿಯಲು ಮಾತ್ರ ಮರೆಯಬೇಡಿ.
ವ್ಯಾಯಾಮ
ಪ್ರತಿನಿತ್ಯವೂ ವ್ಯಾಯಾಮ ಮಾಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ಜುಂಬಾ, ಯೋಗ, ಜಿಮ್ ಅಥವಾ ಸಾಮಾನ್ಯವಾಗಿ ನಡೆಯುವುದು ನಿಮ್ಮ ವ್ಯಾಯಾಮವಾಗಿರಬಹುದು. ನಿಮ್ಮ ದೇಹವನ್ನು ಫಿಟ್ ಹಾಗೂ ಆರೋಗ್ಯವಾಗಿ ಇಡಲು ಸ್ವಲ್ಪ ಸಮಯ ವ್ಯಯಿಸಿ. ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡುವ ಕಾರಣದಿಂದಾಗಿ ಸಂತೋಷದ ಹಾರ್ಮೋನ್ ಗಳು ಬಿಡುಗಡೆ ಆಗುವುದು. ಇದರಿಂದ ದಿನವಿಡಿ ನೀವು ಸಂತೋಷವಾಗಿ ಇರಬಹುದು.
ಮಾಡುವ ಕೆಲಸದ ಪಟ್ಟಿ ಮಾಡಿ
ದಿನದಲ್ಲಿ ನೀವು ಮಾಡುವ ಕೆಲಸದ ಪಟ್ಟಿ ಮಾಡಿ. ಯಾವುದನ್ನು ಮೊದಲು ಮಾಡಬೇಕು ಮತ್ತು ಯಾವ್ಯಾವ ಕೆಲಸಗಳು ಆ ದಿನ ಆಗಬೇಕು ಎಂಬ ಪಟ್ಟಿ ಮಾಡಿ. ಹೀಗೆ ಮಾಡಿದರೆ ಅದರಿಂದ ಸಮಯ ಹೊಂದಾಣಿಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು ಮತ್ತು ಯಾವುದೇ ಕೆಲಸವು ಬಿಟ್ಟು ಹೋಗದು. ಇದನ್ನು ಕಠಿಣ ರೀತಿಯಲ್ಲಿ ಪಾಲಿಸಬೇಕೆಂದಿಲ್ಲ. ಆದರೆ ಒಂದು ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯ ಅಭ್ಯಾಸ.
ಮೊಬೈಲ್ನಿಂದ ದೂರವಿರಿ
ಮೊಬೈಲ್ ಎನ್ನುವುದು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರ ಹೊರತಾಗಿ ಒಂದು ದಿನವನ್ನು ಕಲ್ಪನೆ ಮಾಡುವುದು ಕೂಡ ಕಷ್ಟವಾಗುತ್ತದೆ. ಆದರೆ ದಿನವಿಡಿ ಅದರಲ್ಲೇ ಕಾಲ ಕಳೆಯಬೇಕೆಂದಿಲ್ಲ. ಬೆಳಗ್ಗೆ ನೀವು ಮೊಬೈಲ್ ಫೋನ್ ನ್ನು ಮುಟ್ಟದಿರಲು ನಿರ್ಧರಿಸಿ ಮತ್ತು ಪ್ರತೀ ಹತ್ತು ನಿಮಿಷಕ್ಕೊಮ್ಮೆ ನಿಮ್ಮ ಮೊಬೈಲ್ ಪರೀಕ್ಷೆ ಮಾಡಬೇಡಿ.
ಮೊದಲು ಫ್ರೆಶ್ ಆಗಿ
ಆ ದಿನಕ್ಕೆ ತಯಾರಾಗುವುದು ಮತ್ತೊಂದು ಕ್ರಮವಾಗಿದೆ. ಇದು ಬೆಳಗ್ಗಿನ ಅತೀ ಪ್ರಮುಖ ಭಾಗ ಮತ್ತು ಇದು ದಿನವಿಡಿ ನಿಮ್ಮನ್ನು ಸಮಸ್ಯೆಯಿಂದ ದೂರವಿಡುವುದು. ಕೆಲವರು ಮೊದಲು ಬಟ್ಟೆಗೆ ಇಸ್ತ್ರಿ ಮಾಡಿಟ್ಟು, ಬಳಿಕ ಸ್ನಾನ ಮಾಡುವರು. ಇನ್ನು ಕೆಲವರು ಪತ್ರಿಕೆ ಓದುತ್ತಾ ಮನೆಯಿಡಿ ಸುತ್ತು ಬರುತ್ತಿರುವರು. ಕೆಲವರಿಗೆ ಮೊದಲು ಏನು ಮಾಡಬೇಕು ಎಂದು ತಿಳಿಯುವುದೇ ಇಲ್ಲ. ಒಂದು ಕ್ರಮವನ್ನು ಪಾಲಿಸಿ. ಇದರಿಂದ ನೀವು ಸಂಯೋಜಿತವಾಗಿರಬಹುದು.
ಬ್ರೇಕ್ ಫಾಸ್ಟ್ ಮಿಸ್ ಮಾಡಬೇಡಿ
ಖಾಲಿ ಹೊಟ್ಟೆಯಲ್ಲಿ ನೀವು ಖಂಡಿತವಾಗಿಯೂ ಒಳ್ಳೆಯ ದಿನ ಸಾಗಿಸಲು ಸಾಧ್ಯವಿಲ್ಲ. ಇದರಿಂದ ಬೆಳಗ್ಗಿನ ಉಪಾಹಾರವು ಅಗತ್ಯವಾಗಿ ಇರುವುದು. ನಿಮಗೆ ಏನು ಇಷ್ಟವೋ ಅದನ್ನು ತಿನ್ನಿ. ಆದರೆ ಅತಿಯಾಗಿ ತಿನ್ನಬೇಡಿ. ಇದರಿಂದ ನಿದ್ರೆ ಮತ್ತು ಆಲಸ್ಯ ಬರಬಹುದು. ಉಪಾಹಾರವು ದಿನದ ಕೆಲಸ ಮಾಡಲು ಶಕ್ತಿ ನೀಡುವುದು ಮತ್ತು ನಿಮ್ಮ ಏಕಾಗ್ರತೆಗೆ ನೆರವಾಗುವುದು.