ವಾಂತಿ ವಿಪರೀತ ಹಿಂಸೆ ನೀಡುತ್ತದೆ. ಪದೇ ಪದೇ ಬರುವ ವಾಂತಿಯಿಂದ ಸುಸ್ತಾಗುತ್ತದೆ. ಬೆಳಿಗ್ಗೆ ಎದ್ದಾಗ ಕೆಲವರಿಗೆ ವಾಂತಿ ಬಂದ್ರೆ ಮತ್ತೆ ಕೆಲವರಿಗೆ ಪ್ರಯಾಣದ ವೇಳೆ ವಾಂತಿ ಕಾಣಿಸುತ್ತದೆ. ಇದಕ್ಕೆ ಮನೆಯಲ್ಲಿಯೇ ಅನೇಕ ಔಷಧಿಯಿದೆ.
ವಾಂತಿ ಒಂದು ರೋಗವಲ್ಲ. ಒಂದು ಎರಡು ಬಾರಿ ವಾಂತಿಯಾದ್ರೆ ಸಹಿಸಿಕೊಳ್ಳಬಹುದು. ಆದ್ರೆ ನಾಲ್ಕೈದು ಬಾರಿ ವಾಂತಿಯಾದ್ರೆ ಕಷ್ಟವಾಗುತ್ತದೆ. ಒಮ್ಮೊಮ್ಮೆ ಏನೇ ಆಹಾರ ತಿಂದ್ರೂ ವಾಪಸ್ ಬರುತ್ತದೆ. ಕೊನೆ ಕೊನೆಗೆ ನೀರು ಕುಡಿದ್ರೂ ವಾಪಸ್ ಬರುತ್ತದೆ. ವಾಂತಿಯಿಂದ ಸುಸ್ತಾಗಿ ಆಸ್ಪತ್ರೆ ಸೇರುವುದಿದೆ. ವಾಂತಿ ಮನುಷ್ಯನನ್ನು ನಿತ್ರಾಣ ಮಾಡುತ್ತದೆ. ಈ ವಾಂತಿ ಅನೇಕ ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಆಹಾರ ವಿಷವಾದರೆ, ಹೊಟ್ಟೆಯ ಸಮಸ್ಯೆಗಳು, ಆಹಾರ ಅಲರ್ಜಿ, ಮೈಗ್ರೇನ್, ಗ್ಯಾಸ್, ದೀರ್ಘಕಾಲದ ಖಾಲಿ ಹೊಟ್ಟೆ, ಶೀತ, ಜ್ವರ, ಒತ್ತಡ, ಯಾವುದೇ ರೀತಿಯ ಭಯ, ಪ್ರಯಾಣದ ಸಮಯದಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ವಾಂತಿ ಕಾಣಿಸಿಕೊಳ್ಳುತ್ತದೆ. ಈ ವಾಂತಿಗೆ ಮನೆ ಮದ್ದುಗಳಿವೆ. ಕೆಲ ಔಷಧಿಗಳು ತಕ್ಷಣ ಪರಿಣಾಮ ಬೀರುತ್ತವೆ. ಇಂದು ನಾವು ವಾಂತಿಗೆ ಮನೆ ಮದ್ದುಗಳು ಯಾವುವು ಎಂಬುದನ್ನು ಹೇಳ್ತೇವೆ.
ಜೇನುತುಪ್ಪ – ಶುಂಠಿ
ವಾಂತಿಯಾದರೆ ಒಂದು ಇಂಚಿನ ತುರಿದ ಶುಂಠಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ನೀರಿಗೆ ಬೆರೆಸಿ ಸೇವಿಸುವುದರಿಂದ ತಕ್ಷಣದ ಲಾಭ ದೊರೆಯುತ್ತದೆ.
ಲವಂಗ : ವಾಂತಿ ಹೆಚ್ಚಾಗಿ ಕಾಡ್ತಿದ್ದರೆ ಲವಂಗ ಪ್ರಯೋಜನಕಾರಿ. ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಹೀರಬೇಕು. ಇದು ವಾಂತಿಯನ್ನು ಕಡಿಮೆ ಮಾಡುತ್ತದೆ.
ಪುದೀನಾ : ವಾಂತಿ ಬರ್ತಿದ್ದರೆ ಅಥವಾ ವಾಂತಿ ಬಂದಂತೆ ಅನ್ನಿಸಿದ್ರೆ ಪುದೀನ ಒಳ್ಳೆಯದು. ಪುದೀನಾ ಟೀ ತಯಾರಿಸಿ ಕುಡಿಯಿರಿ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ನೀರಿಗೆ ಪುದೀನಾ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕುಡಿಯಬಹುದು. ಇಲ್ಲವೆಂದ್ರೆ ನೀವು ಪುದೀನಾ ಎಲೆಗಳನ್ನು ಜಗಿಯುವುದರಿಂದ ತ್ವರಿತ ಉಪಶಮನ ಸಿಗುತ್ತದೆ.
ಕೊತ್ತಂಬರಿ ರಸ : ಸ್ವಲ್ಪ ಹಸಿರು ಕೊತ್ತಂಬರಿ ಸೊಪ್ಪಿನ ರಸ, ರುಚಿಗೆ ತಕ್ಕಂತೆ ಕಲ್ಲು ಉಪ್ಪು ಮತ್ತು ಒಂದು ಲೋಟ ನೀರಿಗೆ ನಿಂಬೆಹಣ್ಣನ್ನು ಹಿಂಡಿ ಕುಡಿಯುವುದರಿಂದ ಈ ಸಮಸ್ಯೆ ದೂರವಾಗುತ್ತದೆ.
ವಾಂತಿಗೆ ಜೀರಿಗೆ ಮದ್ದು : ವಾಂತಿ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಒಂದೂವರೆ ಚಮಚ ಜೀರಿಗೆ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಜೀರಿಗೆ ಪುಡಿಯನ್ನು ನೀವು ನೀರಿನಲ್ಲಿ ಕುದಿಸಿ, ಸಕ್ಕರೆ ಬೆರೆಸಿ ಕೂಡ ಕುಡಿಯಬಹುದು.
ಧನಿಯಾ ಪುಡಿ: ಒಂದು ಲೋಟ ನೀರಿಗೆ ಅರ್ಧ ಚಮಚ ಧನಿಯಾ ಪುಡಿ, ಅರ್ಧ ಚಮಚ ಮೆಂತ್ಯೆ ಪುಡಿ ಮತ್ತು ಸ್ವಲ್ಪ ಸಕ್ಕರೆ ಅಥವಾ ಕಲ್ಲು ಸಕ್ಕರೆ ಬೆರೆಸಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ.
ಬೇವಿನ ತೊಗಟೆ : ಮನೆಯಲ್ಲಿ ಯಾರಿಗಾದರೂ ಇಂತಹ ಸಮಸ್ಯೆ ಇದ್ದರೆ ಬೇವಿನ ತೊಗಟೆ ಬಳಸಿ. ಬೇವಿನ ತೊಗಟೆ ಉಜ್ಜಿ ಅದರ ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕೊಟ್ಟರೆ ಸ್ವಲ್ಪ ಹೊತ್ತಿನಲ್ಲಿ ವಾಂತಿ ನಿಲ್ಲುತ್ತದೆ.
ತುಳಸಿ ಎಲೆ : ಒಂದು ಚಮಚ ತುಳಸಿ ಎಲೆ ರಸದಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ವಾಂತಿಗೆ ಪರಿಹಾರ ಕಂಡುಕೊಳ್ಳಬಹುದು.
ಈರುಳ್ಳಿ ರಸ : ಪದೇ ಪದೇ ವಾಕರಿಕೆ ಬಂದರೆ ಈರುಳ್ಳಿ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದು ಕೂಡ ಪ್ರಯೋಜನಕಾರಿ.
ಏಲಕ್ಕಿ – ಕರಿಮೆಣಸು : ನಾಲ್ಕು ಸಣ್ಣ ಏಲಕ್ಕಿ ಮತ್ತು 5-6 ಕರಿಮೆಣಸುಗಳನ್ನು ಮಾಗಿದ ಟೊಮೆಟೊ ರಸದಲ್ಲಿ ಮಿಶ್ರಣ ಮಾಡಿ. ಈ ಜ್ಯೂಸ್ ಕುಡಿಯುವುದರಿಂದ ತ್ವರಿತ ಪರಿಹಾರವೂ ಸಿಗುತ್ತದೆ. ಬೇಗ ವಾಂತಿ ಕಡಿಮೆಯಾಗುತ್ತದೆ.