ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ಗೊತ್ತಾ ?

0 999

Kannada Astrology Tips :ಬೇರೆ ಬೇರೆ ರಾಶಿಯವರಿಗೆ ನಾನಾ ಬಣ್ಣಗಳು ಅದೃಷ್ಟ ತರುತ್ತದೆ ಎಂಬುದು ಗೊತ್ತಿರುವ ಸಂಗತಿ. ಆದರೆ ಯಾವ ರಾಶಿಯವರಿಗೆ ಯಾವ ಬಣ್ಣ ತುಂಬ ಚೆನ್ನಾಗಿ ಆಗಿಬರುತ್ತದೆ ಮತ್ತು ಆ ಬಣ್ಣವನ್ನು ಧರಿಸುವುದರಿಂದ ಆ ದಿನವು ಹೇಗೆ ಮತ್ತೂ ಸುಂದರವಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಒಟ್ಟು ಹನ್ನೆರಡು ರಾಶಿಗಳಿರುತ್ತವೆ ಮತ್ತು ಪ್ರತಿ ರಾಶಿಗೂ ಪ್ರತ್ಯೇಕವಾದ ಅದೃಷ್ಟದ ಬಣ್ಣಗಳಿರುತ್ತವೆ. ಸೂರ್ಯನ ಚಲನೆ ಆಧಾರದಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಿ. ಆ ನಂತರ ನಿಮ್ಮ ಸ್ವಭಾವದ ಮೇಲೆ ಬೀರುವ ಪರಿಣಾಮ ಇದ್ದೇ ಇರುತ್ತದೆ. ಅದಕ್ಕಾಗಿ ಕಾಯುವ ಮೊದಲು ನಿಮ್ಮ ಅದೃಷ್ಟದ ಬಣ್ಣವನ್ನು ಧರಿಸಿ.

ಅಂದ ಹಾಗೆ ನೆನಪಿರಲಿ, ಇದು ವೈದಿಕ ಜ್ಯೋತಿಷ್ಯವಲ್ಲ. ಇಂಗ್ಲಿಷ್ ನಲ್ಲಿ ಸನ್ ಸೈನ್ (ಸೂರ್ಯನ ಚಲನೆ ಆಧಾರದಲ್ಲಿ ರಾಶಿ ನಿರ್ಣಯ ಮಾಡವುದು) ಅಂತಾರೆ. ಅದರ ಆಧಾರದಲ್ಲಿ ನಿಮ್ಮ ಅದೃಷ್ಟದ ಬಣ್ಣ ನಿರ್ಣಯ ಮಾಡಲಾಗಿದೆ. ಆದ್ದರಿಂದ ಮೊದಲಿಗೆ ನಿಮ್ಮ ಸನ್ ಸೈನ್ ಯಾವುದು ಅನ್ನೋದನ್ನು ತಿಳಿದುಕೊಂಡು ಬಿಡಿ.ಆ ನಂತರ ಇಲ್ಲಿ ಕೊಟ್ಟಿರುವ ಹನ್ನೆರಡು ರಾಶಿಗಳವರ ಅದೃಷ್ಟದ ಬಣ್ಣ ಯಾವುದು ಎಂಬುದನ್ನು ಓದಿಕೊಳ್ಳಿ.

1,ಮೇಷ ರಾಶಿ-ಈ ರಾಶಿಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿಯಿಂದ ಮಾಡುತ್ತಾರೆ. ತುಂಬ ಖುಷಿ ಮತ್ತು ಅತ್ಯುತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಹೇಗೆ ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೋ ಹಾಗೆ. ಯಾರು ಮೇಷ ರಾಶಿಯವರೋ ಅವರಿಗೆ ಕೆಂಪು ಬಣ್ಣ ಇನ್ನಷ್ಟು ಬಲ ಹಾಗೂ ಉತ್ಕಟವಾದ ಪ್ರೀತಿಯನ್ನು ತರುತ್ತದೆ.

2, ವೃಷಭ ರಾಶಿ-ಈ ರಾಶಿಯವರು ಭೂಮಿ ತತ್ವದವರು. ಆದ್ದರಿಂದ ಅನುಮಾನವೇ ಬೇಡ, ಇವರ ಅದೃಷ್ಟದ ಬಣ್ಣ ಹಸಿರು. ತುಂಬ ಶ್ರಮ ಜೀವಿಗಳು ಮತ್ತು ಸದಾ ಉತ್ಸಾಹದಿಂದ ಪುಟಿಯುವ ಸಣ್ಣ ವಯಸ್ಸಿನವರ ಹುಮ್ಮಸ್ಸು ಇವರದು.

3,ಮಿಥುನ ರಾಶಿ-ಕಿತ್ತಳೆ ಬಣ್ಣವು ಸ್ವಾತಂತ್ರ್ಯ, ವೈವಿಧ್ಯತೆ ಹಾಗೂ ಸ್ಫೂರ್ತಿಯ ದ್ಯೋತಕ. ಮಿಥುನ ರಾಶಿಯವರು ಈ ಎಲ್ಲ ಗುಣಗಳನ್ನೂ ಹೊಂದಿರುತ್ತಾರೆ. ಇನ್ನೊಬ್ಬರ ಜತೆಗೆ ತುಂಬ ಆರಾಮವಾಗಿ ಮಾತನಾಡುತ್ತಾರೆ. ಸಮಾಜಮುಖಿಯಾದ ವ್ಯಕ್ತಿತ್ವ ಇವರದು. ಕಿತ್ತಳೆ ಬಣ್ಣ ಧರಿಸುವುದರಿಂದ ಇನ್ನಷ್ಟು ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ.

4, ಕರ್ಕಾಟಕ ರಾಶಿ-ಈ ರಾಶಿಯವರು ತುಂಬ ಸೂಕ್ಷ್ಮ, ಸೌಹಾರ್ದದ ಸ್ವಭಾವದವರು. ಕರ್ಕಾಟಕ ರಾಶಿಯ ವ್ಯಕ್ತಿಗಳು ಆಳವಾದ ಚಿಂತಕರು ಹಾಗೂ ಅದ್ಭುತ ಊಹಾಶಕ್ತಿ ಇರುವವರು. ನೇರಳೆ ಬಣ್ಣ ಇವರ ಪಾಲಿಗೆ ಅದೃಷ್ಟ. ಈ ಬಣ್ಣ ಧರಿಸುವುದರಿಂದ ಇವರ ಬುದ್ಧಿಶಕ್ತಿ ಹಾಗೂ ಸಾಮರ್ಥ್ಯ ಮತ್ತೂ ಹೆಚ್ಚಾಗುತ್ತದೆ.

5, ಸಿಂಹ ರಾಶಿ-ಇವರು ಶಕ್ತಿಶಾಲಿ, ಧೈರ್ಯಶಾಲಿ ಹಾಗೂ ಉಗ್ರ ಸ್ವಭಾವದವರು. ಸಂತೋಷ, ಭರವಸೆ ಹಾಗೂ ತೀರ್ಮಾನಗಳನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ಅದು ಅರಿಶಿನ. ಇದೇ ವೇಳೆ ಇದು ಸ್ಪಷ್ಟತೆ ಹಾಗೂ ಶಕ್ತಿಯನ್ನು ಸಹ ಸೂಚಿಸುತ್ತದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಈ ಬಣ್ಣ ಸಹಾಯ ಮಾಡುತ್ತದೆ.

6, ಕನ್ಯಾ ರಾಶಿ-ಕನ್ಯಾ ರಾಶಿಯವರ ಪಾಲಿನ ಅದೃಷ್ಟದ ಬಣ್ಣ ನೀಲಿ. ಇದು ಆಕಾಶ ಹಾಗೂ ಸಮುದ್ರ ಎರಡನ್ನೂ ಪ್ರತಿನಿಧಿಸುತ್ತದೆ. ನೀವು ಸ್ವಚ್ಛಂದ ಹಕ್ಕಿಯಂಥವರು ಹಾಗೂ ಪರ್ಫೆಕ್ಷನಿಸ್ಟ್. ನೀಲಿ ಬಣ್ಣ ಆ ಗುಣವನ್ನೇ ಸೂಚಿಸುತ್ತದೆ. ಪ್ರಾಮಾಣಿಕ, ವಿಶ್ವಾಸಾರ್ಹ ಹಾಗೂ ನಂಬಿಕಸ್ಥರು ಯಾವಾಗಲೂ ಈ ಬಣ್ಣಕ್ಕೆ ಪ್ರಾಮುಖ್ಯ ಕೊಡುತ್ತಾರೆ.

7, ತುಲಾ ರಾಶಿ-ಎಲ್ಲಕ್ಕೂ ಹೆಚ್ಚಾಗಿ ನ್ಯಾಯಬದ್ಧತೆಯನ್ನು ನಿರೀಕ್ಷಿಸುವವರು ಇವರು. ಸಂಧಾನ ಮಾಡುವ ವಿಚಾರದಲ್ಲಿ ನಿಷ್ಣಾತರು. ಇವರಿಗೆ ಪಚ್ಚೆ ಹಸಿರು ಬಣ್ಣ ಚೆನ್ನಾಗಿ ಆಗಿಬರುತ್ತದೆ. ಪ್ರಕೃತಿ, ಶಕ್ತಿ, ಅಭಿವೃದ್ಧಿ, ಸುರಕ್ಷತೆ, ಫಲವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ.

8, ವೃಶ್ಚಿಕ ರಾಶಿ-ಲೈಂಗಿಕತೆ, ಪ್ರೀತಿ, ಸಾಮರ್ಥ್ಯ, ಜಾದೂ ಇವೆಲ್ಲವನ್ನೂ ಪ್ರತಿನಿಧಿಸುವ ಬಣ್ಣ ಕೆಂಪು ಮತ್ತು ನೇರಳೆ. ಈ ಎರಡೂ ಬಣ್ಣಗಳ ಗುಣವನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ.

9,ಧನುಸ್ಸು ರಾಶಿ-ಶಕ್ತಿ ಹಾಗೂ ಆಸಕ್ತಿ ಎರಡರ ತಾಳ-ಮೇಳವನ್ನು ಸೂಚಿಸುವ ವಿದ್ಯುತ್ ಸಂಚಾರದಂಥ ಗುಣ ಧನುಸ್ಸು ರಾಶಿಯವರದು. ಆತ್ಮವಿಶ್ವಾಸ ಕೂಡ ಹೆಚ್ಚಿರುತ್ತದೆ. ಯಾವುದೇ ವಿಚಾರ ಸರಿ ಎಂದು ಗೊತ್ತಾದ ಮೇಲೆ ಅದನ್ನು ಹೇಳುವುದಕ್ಕೂ ಹೆದರುವ ಜಾಯಮಾನದವರಲ್ಲ.ತಿಳಿ ನೀಲಿಇವರಿಗೆ ಅದೃಷ್ಟದ ಬಣ್ಣ.

10, ಮಕರ ರಾಶಿ
ಅಪರೂಪದ ಹಾಗೂ ಆಳದ ಚಿಂತನೆ ಮಾಡುವ ಮಕರ ರಾಶಿಯವರು ಇಂಡಿಗೋ ಬಣ್ಣವನ್ನು ಪ್ರತಿನಿಧಿಸುತ್ತಾರೆ. ಸ್ವಂತ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ಇಂಡಿಗೋ ಬಣ್ಣ ಅಧ್ಯಾತ್ಮ ಹಾಗೂ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಎರಡಕ್ಕೂ ಮಕರ ರಾಶಿಯವರು ಅಭಿಮಾನಿಗಳು.

11, ಕುಂಭ ರಾಶಿ-ತುಂಬ ಸೂಕ್ಷ್ಮ ಸ್ವಭಾವ ಹಾಗೂ ಸಾಮರ್ಥ್ಯ ಎರಡನ್ನೂ ಏಕ ಕಾಲಕ್ಕೆ ತೋರಿಸಬಲ್ಲಂಥವರು ಕುಂಭ ರಾಶಿಯವರು. ನೀಲಿ ಬಣ್ಣ ಪ್ರತಿನಿಧಿಸುವ ಗುಣಗಳಾದ ನಂಬಿಕೆ, ವಿಶ್ವಾಸ, ಸ್ವಚ್ಛತೆ ಮತ್ತು ಅರ್ಥ ಮಾಡಿಕೊಳ್ಳುವ ಗುಣ ಇವರದು. ಎಲೆಕ್ಟ್ರಿಕ್ ಬ್ಲೂ ಧರಿಸಿ, ಜಾದೂ ಗಮನಿಸಿ.

12, ಮೀನ ರಾಶಿ-ಮೀನ ರಾಶಿಯವರಿಗೆ ತಮ್ಮದೇ ಪ್ರಪಂಚ. ಯಾವುದಕ್ಕೂ ಅಂಟಿಕೊಳ್ಳುವವರಲ್ಲ. ಆಧ್ಯಾತ್ಮಿಕ ಚಿಂತನೆ ಹೆಚ್ಚು. ಅಂತರ್ಮುಖಿಗಳಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಸಮತೋಲನ ಹಾಗೂ ಪ್ರಗತಿಯನ್ನು ಸೂಚಿಸುವ ಸಮುದ್ರ ಹಸಿರು ಬಣ್ಣ ಇವರಿಗೆ ಅದೃಷ್ಟ ತರುತ್ತದೆ.

Leave A Reply

Your email address will not be published.