ಪಂಚಕರ್ಮ ಎಂದರೇನು? ಪಂಚಕರ್ಮ ವಿಧಗಳು ಯಾವುವು?

Kannada Astrology :ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ ದೋಶಗಳನ್ನು ಕ್ರಮಬದ್ಧವಾಗಿ, ಸುಲಭವಾಗಿ, ಸುರಕ್ಷಿತವಾಗಿ ದೇಹದಿಂದ ಹೊರಹಾಕಲು, ಹಾಗೂ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ) ಬಲಿಷ್ಠ ಪಡಿಸಲು ಆಯುರ್ವೇದದಲ್ಲಿ ಹೇಳಲ್ಪಟ್ಟ ವಿಶಿಷ್ಠ ಚಿಕಿತ್ಸಾ ಪರಂಪರೆ ಈ ಪಂಚಕರ್ಮ.

ಪಂಚಕರ್ಮ ಕೇವಲ ರೋಗಿಗಳಲ್ಲದೇ, ಆರೋಗ್ಯವಂತರೂ ತೆಗೆದುಕೊಳ್ಳಬಹುದಾದಂತಹ ಒಂದು ಚಿಕಿತ್ಸಾ ಕ್ರಮ. ಅರೋಗ್ಯವಂತರಲ್ಲಿ ಋತುಗಳಿಗೆ ಅನುಗುಣವಾಗಿ ಹಾಗೂ ರೋಗಿಗಳಲ್ಲಿ ಯಾವುದೇ ಋತುವಿನಲ್ಲಿ ಮಾಡುವಂತಹ ಚಿಕಿತ್ಸೆ. ಆಯುರ್ವೇದದ ಮೂಲ ಸಿದ್ಧಾಂತ “ಆರೊಗ್ಯವಂತರಲ್ಲಿ ಆರೋಗ್ಯ ಕಾಪಾಡುವುದು ಹಾಗೂ ರೋಗಿಗಳಲ್ಲಿ ರೋಗ ನಿವಾರಣೆ ಮಾಡುವುದು”. ಈ ಸಿದ್ಧಾಂತವನ್ನು ಉಳಿಸಿಕೊಳ್ಳಲು ಪಂಚಕರ್ಮ ಪರಿಪಾಲನೆ ಅತ್ಯಗತ್ಯ.

ಆರೋಗ್ಯವಂತರು ಋತುವಿಗೆ ಅನುಗುಣವಾಗಿ ಆಯಾ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಆಯಾ ದೋಷಗಳಿಂದ ಉಂಟಾಗುವ ಕಾಯಿಲೆಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದಾಗಿದೆ.  ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿರುವವರು ಹಾಗೂ ಕೇವಲ ಶಮನ ಚಿಕಿತ್ಸೆಯಿಂದ ಗುಣಮುಖರಾಗದವರು ವೈದ್ಯರ ಸಲಹೆ ಮೇರೆಗೆ ಪಂಚಕರ್ಮ ಚಿಕಿತ್ಸೆಗಳನ್ನು ಮಾಡಿಸಿದರೆ ಕಾಯಿಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಇದಕ್ಕೆ ತಾಳ್ಮೆ ಹಾಗೂ ನಂಬಿಕೆ ಅತ್ಯಗತ್ಯ.

ಪಂಚಕರ್ಮ ವಿಧಗಳು ಯಾವುವು?ಬಹುತೇಕ ಜನರು ತಿಳಿದಿರುವಂತೆ ಅಭ್ಯಂಗ, ಸ್ವೇದನ, ಶಿರೋಧಾರ – ಇವುಗಳು ಪಂಚಕರ್ಮಗಳಲ್ಲ. ಆಚಾರ್ಯ ಚರಕ ಹೇಳುವ ಪ್ರಕಾರ ಪಂಚಕರ್ಮಗಳು –ವಮನ ಕರ್ಮ: ಕಫಕ್ಕೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಔಷಧಿ ಸೇವಿಸಿ ವಾಂತಿ ಮಾಡಿಸುವುದು. ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ವಸಂತ ಋತುವಿನಲ್ಲಿ (ಚಳಿಗಾಲ ಮುಗಿದ ಕೂಡಲೆ) ವಮನ ಕರ್ಮ ಮಾಡಿಸಲಾಗುವುದು. ಏಕೆಂದರೆ, ಸಾಮಾನ್ಯವಾಗಿ ವಸಂತ ಋತುವಿನಲ್ಲಿ ದೇಹದಲ್ಲಿ ಕಫ ಪ್ರಕೋಪಗೊಳ್ಳುತ್ತದೆ. ಹಾಗಾಗಿ ಕಫಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟಲು ವಮನ ಕರ್ಮ ಹೆಚ್ಚು ಉಪಯುಕ್ತವಾಗಿದೆ. ಸಾಮಾನ್ಯವಾಗಿ ವಮನ ಕರ್ಮಕ್ಕೆ 8 ರಿಂದ 15 ದಿನಗಳ ಕಾಲಾವಕಾಶ ಬೇಕಾಗಿರುತ್ತದೆ. ಪಥ್ಯ ಸೇವನೆ ಅತ್ಯಗತ್ಯ.

ವಿರೇಚನ ಕರ್ಮ: ಪಿತ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಔಷಧಿ ಸೇವಿಸಿ ಬೇಧಿ ಮಾಡಿಸುವುದು. ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ಶರದ್ ಋತುವಿನಲ್ಲಿ (ಮಳೆಗಾಲ ಮುಗಿದ ಕೂಡಲೆ) ವಿರೇಚನ ಕರ್ಮ ಮಾಡಿಸಲಾಗುವುದು. ಏಕೆಂದರೆ, ಸಾಮಾನ್ಯವಾಗಿ ಶರದ್ ಋತುವಿನಲ್ಲಿ ದೇಹದಲ್ಲಿ ಪಿತ್ತ ಪ್ರಕೋಪಗೊಳ್ಳುತ್ತದೆ. ಹಾಗಾಗಿ ಪಿತ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟಲು ವಿರೇಚನ ಕರ್ಮ ಹೆಚ್ಚು ಉಪಯುಕ್ತವಾಗಿದೆ. ಸಾಮಾನ್ಯವಾಗಿ ವಿರೇಚನ ಕರ್ಮಕ್ಕೆ 10 ರಿಂದ 18 ದಿನಗಳ ಕಾಲಾವಕಾಶ ಬೇಕಾಗಿರುತ್ತದೆ. ಪಥ್ಯ ಸೇವನೆ ಅತ್ಯಗತ್ಯ.

ಬಸ್ತಿ ಕರ್ಮ: ಯಾವುದೇ ದೋಷಗಳಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ (ಪ್ರಮುಖವಾಗಿ ವಾತ ರೋಗಗಳಿಗೆ) ಗುದ ಮಾರ್ಗದ ಮೂಲಕ ಔಷಧವನ್ನು ಕೊಡುವ ಚಿಕಿತ್ಸಾ ಕ್ರಮ. ಬಸ್ತಿ ಚಿಕಿತ್ಸೆ ಕೊಡುವ ಒಟ್ಟು ಕಾಲಕ್ಕೆ ಅನುಗುಣವಾಗಿ ಯೋಗ ಬಸ್ತಿ (8 ದಿನ), ಕಾಲ ಬಸ್ತಿ (15 ದಿನ), ಕರ್ಮ ಬಸ್ತಿ (30 ದಿನ) ಎಂದು ವಿಂಗಡಿಸಲಾಗಿದೆ. ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ವರ್ಷಾ ಋತುವಿನಲ್ಲಿ ವಾತ ಪ್ರಕೋಪ ತಡೆಯಲು ಈ ಚಿಕಿತ್ಸೆ ಉಪಯುಕ್ತವಾಗಿದೆ.

ಆಸ್ಥಾಪನ ಬಸ್ತಿ:  ಔಷಧಿಯುಕ್ತ ಕಷಾಯ, ಕಲ್ಕ, ಜೇನು ತುಪ್ಪ, ಸೈಂಧವ ಲವಣ, ಸ್ನೇಹ ದ್ರವ್ಯ, ಹಾಲು, ಗೋಮೂತ್ರ ಇತ್ಯಾದಿಗಳನ್ನು ವಿಶಿಷ್ಟ ರೀತಿಯಲ್ಲಿ ಸಮ್ಮಿಲನ ಮಾಡಿ ಗುದಮಾರ್ಗದ ಮೂಲಕ ಕೊಡುವುದು.
ಅನುವಾಸನ ಬಸ್ತಿ – ಔಷಧಿಯುಕ್ತ ಸ್ನೇಹ ದ್ರವ್ಯ ಹಾಗೂ ಸೈಂಧವ ಲವಣವನ್ನು ಮಿಶ್ರಣ ಮಾಡಿ ಕಡಿಮೆ ಮಾತ್ರದಲ್ಲಿ ಗುದ ಮಾರ್ಗದ ಮೂಲಕ ಕೊಡುವುದು.

ನಸ್ಯ ಕರ್ಮ: ಔಷಧಯುಕ್ತ ತೈಲ, ತುಪ್ಪ, ಸ್ವರಸ, ಚೂರ್ಣ – ಇವುಗಳನ್ನು ಕಾಯಿಲೆಗೆ ಅನುಗುಣವಾಗಿ, ನಿಗಧಿ ಪಡಿಸಿದ ಮಾತ್ರದಲ್ಲಿ ಮೂಗಿನ ರಂಧ್ರದ ಮೂಲಕ ಕೊಡುವ ಚಿಕಿತ್ಸಾ ಕ್ರಮಕ್ಕೆ ನಸ್ಯ ಕರ್ಮ ಎನ್ನಲಾಗುವುದು. ಸಾಮಾನ್ಯವಾಗಿ ಕುತ್ತಿಗೆ ಹಾಗೂ ಕುತ್ತಿಗೆಯ ಮೇಲ್ಭಾಗಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ನಸ್ಯ ಕರ್ಮ ಬಹಳ ಉಪಯುಕ್ತ. ಒಂದು ವಿಶೇಷ ಎಂದರೆ, ನಸ್ಯ ಕರ್ಮವನ್ನು ದಿನಚರ್ಯವಾಗಿಯೂ ಉಪಯೋಗ ಮಾಡಬಹುದು.
ಆಚಾರ್ಯ ಸುಶ್ರುತ ಹೇಳುವ ಪ್ರಕಾರ, ರಕ್ತಮೋಕ್ಷಣ ಕೂಡ ಪಂಚಕರ್ಮ ಚಿಕಿತ್ಸೆಗಳಲ್ಲಿ ಒಂದು.

Kannada Astrology ರಕ್ತಮೋಕ್ಷಣ: ಸಾಮಾನ್ಯವಾಗಿ ರಕ್ತದಿಂದ ಉಂಟಾಗುವ ಕಾಯಿಲೆಗಳು (ಚರ್ಮದ ಸಮಸ್ಯೆಗಳು) ಹಾಗೂ ದೂಷಿತ ರಕ್ತ ಹೆಚ್ಚಾದ ಸ್ಥಿತಿಯಲ್ಲಿ ದೇಹದಿಂದ ಆ ಕೆಟ್ಟ ರಕ್ತವನ್ನು ಕ್ರಮಬದ್ಧವಾಗಿ ಹೊರಹಾಕಲ್ಪಡುವುದು. ಇದಕ್ಕೆ ಸಾಮಾನ್ಯವಾಗಿ ಜಿಗಣೆ ಅಥವಾ ಸೂಜಿಯನ್ನು ಬಳಸಿ ರಕ್ತವನ್ನುತೆಗೆಯಲಾಗುವುದು. ಇದರಿಂದ ದೇಹದಲ್ಲಿನ ಕೆಟ್ಟ ರಕ್ತ ಹೋಗಿ ಹೊಸ ರಕ್ತ ಉತ್ಪನ್ನ ಆಗಲು ಉಪಯುಕ್ತವಾಗಿದೆ.

Leave A Reply

Your email address will not be published.