ಮನೆಗೆ ಹಾವು ಬಂದರೆ ಅದರ ಫಲ ಏನು ?

0 1

ಇಂದಿನ ಲೇಖನದಲ್ಲಿ ಸರ್ಪ ದೋಷದ ವಿಚಾರದ ಬಗ್ಗೆ ತಿಳಿಸುತ್ತಿದ್ದೇನೆ. ಭಾರತೀಯರು ಪ್ರಾಣಿಗಳಿಗೆ ದೈವತ್ವದ ಸ್ಥಾನ ಕೊಟ್ಟಿದ್ದೇವೆ. ಆ ಪೈಕಿ ಹಾವುಗಳನ್ನು ಸುಬ್ರಹ್ಮಣ್ಯ ಎಂದು ನಂಬಿದ್ದೇವೆ. ಇನ್ನು ಆ ಭಗವಂತ ಅವುಗಳಿಗೆ ನಾಗಲೋಕ ಅಂತ ಪ್ರತ್ಯೇಕವಾದ ಲೋಕವನ್ನೇ ನೀಡಿದ್ದಾನೆ ಎಂಬುದು ಕೂಡ ನಮ್ಮ ಪುರಾಣಗಳಿಂದ ಕೇಳಿಕೊಂಡು ಬಂದಿರುವ ಸಂಗತಿ.

ಇನ್ನು ನಾವು ವಾಸಿಸುವ ಈ ಭೂಮಿಯಲ್ಲಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಅದೇ ರೀತಿ ಎಲ್ಲ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಅದರಲ್ಲೂ ಸರ್ಪಗಳು ಅಂದರೆ ಹಾವುಗಳಿಗೆ ತೊಂದರೆ ಕೊಟ್ಟರೆ ಖಂಡಿತಾ ಒಳ್ಳೆಯದಾಗಲ್ಲ.

ನೀವು ಸರ್ಪದೋಷ ಎಂಬುದನ್ನು ಕೇಳಿದ್ದಿರಬಹುದು. ಬಹಳ ಜನ ಕೇಳ್ತಾರೆ: ನಾನು ಯಾವುದೇ ಹಾವನ್ನು ಹೊಡೆದಿಲ್ಲ, ತೊಂದರೆ ಕೊಟ್ಟಿಲ್ಲ. ಆದರೂ ನನ್ನ ಜಾತಕದಲ್ಲಿ ಸರ್ಪ ದೋಷ ಬಂದಿದೆಯಲ್ಲಾ ಏಕೆ ಎಂಬ ಪ್ರಶ್ನೆ ಮಾಡುತ್ತಾರೆ.

ಇಹ ಜನ್ಮನಿ, ಅನ್ಯ ಜನ್ಮನಿ ಎಂದು ಶಾಸ್ತ್ರ ಹೇಳುತ್ತದೆ. ಹಾಗೆಂದರೆ ಈ ಜನ್ಮದಲ್ಲಿ ಅಥವಾ ಕಳೆದ ಜನ್ಮದಲ್ಲಿ ಮಾಡಿದ ಕೃತ್ಯದ ಫಲ ಈಗ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಮುತ್ತಾತ, ತಾತ-ಚಿಕ್ಕಪ್ಪ, ತಂದೆ ಅಥವಾ ದೊಡ್ಡಪ್ಪ ಹಾವಿಗೆ ತೊಂದರೆ ಕೊಟ್ಟಿದ್ದರೆ ಈ ರೀತಿ ದೋಷ ಬರುತ್ತದೆ.ಅವರು ಮಾಡಿದ ಪಾಪದ ಫಲ ನಾವೇಕೆ ಅನುಭವಿಸಬೇಕು ಅಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ನಾವು ಹೇಗೆ ಹಕ್ಕು ಸಾಧಿಸುತ್ತೇವೆಯೋ ಅದೇ ರೀತಿ ಪಾಪ- ಪುಣ್ಯಗಳು ಸಹ ಪಿತ್ರಾರ್ಜಿತವಾಗಿ ಬರುತ್ತವೆ.

ನಾಗದೋಷಗಳು ಅಂದರೇನು-ಸರ್ಪವಧಾ (ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾವನ್ನು ಹೊಡೆದು ಹಾಕುವುದು), ಸರ್ಪಾಂಡ (ಹಾವಿನ ಮೊಟ್ಟೆ ನಾಶ ಮಾಡುವುದು) ವಧಾ, ಸರ್ಪ ಕೇಲಿ ದರ್ಶನ (ಮಿಲನ ಕ್ರಿಯೆಯಲ್ಲಿ ತೊಡಗಿದ ಹಾವುಗಳನ್ನು ನೋಡುವುದು), ಸರ್ಪಗಳ ವಾಸಸ್ಥಾನವನ್ನು ನಾಶ ಮಾಡುವುದು…ಇತರ ಕೃತ್ಯಗಳು ದೋಷಗಳು ಎನಿಸಿಕೊಳ್ಳುತ್ತವೆ.

ನಾಗನ ದಾರಿಗೆ ಅಡ್ಡ ಮಾಡಬಾರದು-ಕೆಲವರು ಕೇಳ್ತಾರೆ, ಪದೇ ಪದೇ ನಮ್ಮ ಮನೆಗೆ ಹಾವುಗಳು ಬರುತ್ತವೆ. ಎಷ್ಟೋ ಸಲ ಹಿಡಿಸಿ, ದೂರ ಬಿಡಿಸಿದ್ದೇವೆ. ಆದರೂ ಬರುತ್ತಿದೆ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣವಾಗುವ ದೋಷಗಳು ಏನೆಂದರೆ, ನಾಗವೀಥಿನಿರೋದನ , ಮಲಿನೀಕರಣ ದೋಷ, ಗೃಹ ಗೋಷ್ಠ ನಿರ್ಮಾಣ ಅನ್ನುತ್ತಾರೆ. ಅಂದರೆ ಸರ್ಪಗಳು ಸಂಚರಿಸುವ ದಾರಿಗೆ ಅಡ್ಡ ಮಾಡಿದರೆ, ಮಲಿನ ಮಾಡಿದರೆ, ಆ ದಾರಿಯ ಶುದ್ಧತೆ ಹಾಳು ಮಾಡಿದರೆ ಅದು ದೋಷ ಆಗುತ್ತದೆ.

ವಾಸ್ತು ಹೋಮ ಮತ್ತೆ ಮತ್ತೆ ಮಾಡಬೇಕು-ವಾಸ್ತು ಹೋಮ ಅನ್ನೋದು ಗೃಹಪ್ರವೇಶ ಸಂದರ್ಭದಲ್ಲಿ ಮಾತ್ರ ಮಾಡುವುದಲ್ಲ. ಒಂದು, ಮೂರು, ಒಂಬತ್ತು ಅಥವಾ ಹನ್ನೆರಡು ವರ್ಷಕ್ಕೊಮ್ಮೆ ವಾಸ್ತು ಪುರುಷನ ಹೋಮ ಮಾಡಬೇಕು. ನಾನಾ ಕಾರಣಗಳಿಗಾಗಿ ವಾಸ್ತು ಪುರುಷನ ಶಕ್ತಿ ಕ್ಷೀಣವಾಗುತ್ತದೆ. ಇಲ್ಲಿ ವಾಸ್ತುಪುರುಷ ಅಂದರೆ ಒಬ್ಬನೇ ಅಲ್ಲ ಆತನ ಜತೆಗೆ ಐವತ್ಮೂರು ದೇವತೆಗಳು ಇದ್ದಾರೆ. ಅವರಿಗೂ ಶಾಂತಿ ಮಾಡಬೇಕು.

ಅಘೋರಾಸ್ತ್ರ ಅಂದರೆ ಅಘೋರ ಮಂತ್ರದಿಂದ ಹೋಮ ಮಾಡಬೇಕು. ಇನ್ನು ರಾಕ್ಷೋಜ್ಞ ಅಂದರೆ ರಾಕ್ಷಸ ಶಕ್ತಿಯ ನಾಶ ಮಾಡುವ ಹೋಮ. ಅಂದರೆ ನಕಾರಾತ್ಮಕ ಪರಿಣಾಮ ಬೀರುವ ಶಕ್ತಿಗಳ ನಾಶ ಆಗಲಿ ಎಂದು ಪ್ರಾರ್ಥಿಸಿ ಮಾಡುವ ಹೋಮ.ಇನ್ನು ನಾಗಗಳ ಬಗ್ಗೆ ಇರುವ ನಂಬಿಕೆ ಹೀಗಿದೆ ಎರಡು ಹಾವುಗಳು ಕಚ್ಚಾಡುವುದನ್ನು ನೋಡಿದರೆ ಹತ್ತಿರದವರು ಹಾಗೂ ಸಂಬಂಧಿಕರ ಮಧ್ಯೆ ಜಗಳಗಳಾಗುತ್ತವೆ

ಒಂದು ಹಾವು ಮತ್ತೊಂದು ಹಾವನ್ನು ನುಂಗುತ್ತಿರುವುದು ನೋಡಿದರೆ ಬೆಳೆ ನಾಶದ ಸೂಚನೆ ಮನೆಯೊಳಗೆ ಹಾವು ಬಂದರೆ ಅದು ಆಸ್ತಿ ಬರುತ್ತದೆ ಎಂಬ ಸಂಕೇತ. ಅದೇ ಮನೆಯಿಂದ ಆಚೆ ಹೋಗುತ್ತಿರುವುದು ನೋಡಿದರೆ ಸಂಪತ್ತು ನಾಶವಾಗುವ ಸೂಚನೆ ಹೆಡೆ ಎತ್ತಿಕೊಂಡು ಹಾವು ಎಡದಿಂದ ಬಲಕ್ಕೆ ಹೋದರೆ ಶುಭ ಬಲಗಡೆಯಿಂದ ವ್ಯಕ್ತಿ ಹತ್ತಿರ ಹಾವು ಬಂದರೆ ಅದು ಯಶಸ್ಸನ್ನು ತೋರಿಸುವ ಸಂಕೇತ. ಅದೇ ಎಡಗಡೆಯಿಂದ ಬಂದರೆ ಅಶುಭ ಹೆಡೆ ಎತ್ತಿ ವ್ಯಕ್ತಿಯ ಕಡೆ ದಿಟ್ಟಿಸಿ ನೋಡಿದರೆ ಸಂಪತ್ತು ದೊರೆಯುತ್ತದೆ ಎಂದರ್ಥ. ಬಿಲ ಸೇರುವ ವೇಳೆ ನೋಡಿದರೆ ಬಡವರಿಗೆ ಶ್ರೀಮಂತಿಕೆಯೂ ಶ್ರೀಮಂತರಿಗೆ ಬಡತನವನ್ನು ಸೂಚಿಸುತ್ತದೆ

Leave A Reply

Your email address will not be published.